

ಹೈದರಾಬಾದ್: ಮುಂದಿನ ಕೆಲವೇ ದಿನಗಳಲ್ಲಿ ಜರುಗಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿದ್ದು, ಅಭ್ಯರ್ಥಿಗಳು ಈಗಾಗಲೇ ಮೊದಲ ಸುತ್ತಿನ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈ ವಿಚಾರಕ್ಕೆ ಬರುವುದಾದರೆ ಬಿಜೆಪಿ ಒಂದು ಹೆಜ್ಜೆ ಮುಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಕೈಗೊಂಡಿದೆ. ಇದೀಗ ಬಿಜೆಪಿ ಅಭ್ಯರ್ಥಿಯೊಬ್ಬರು ಮಾತನಾಡುವ ಭರದಲ್ಲಿ ಹೇಳಿಕೆ ಒಂದನ್ನು ನೀಡಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದಿರುವ ನೀವುಗಳು ಮುಂಬರುವ ಲೋಕಸಬೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಿದ್ದರೆ ನರಕಕ್ಕೆ ಹೋಗುತ್ತೀರಾ ಎಂದು ಹೇಳುವ ಮೂಲಕ ನಿಜಾಮಾಬಾದ್ ಸಂಸದ ಅರವಿಂದ್ ವಿವಾದವನ್ನು ಹುಟ್ಟು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಧೇಶಿಸಿ ಮಾತನಾಡಿದ ಅರವಿಂದ್, ತಿನ್ನಿಸುತ್ತಿರುವ ಕೈಗಳನ್ನು ದಯವಿಟ್ಟು ಕಚ್ಚಬೇಡಿ. ನಿಮಗೆ ಉಚಿತ ಆಹಾರ, ಗ್ಯಾಸ್, ಶಿಕ್ಷಣ ದೊರೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಿಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಮದುವೆಗೆ, ಸ್ವಸಹಾಯ ಸಂಘಗಳಿಗೆ ಸಾಲ ಕೊಡುತ್ತಿದ್ದಾರೆ. ತ್ರಿವಳಿ ತಲಾಖ್ ರದ್ದುಗೊಳಿಸಿ ನಿಮ್ಮ ಆತ್ಮಗೌರವವನ್ನು ಖಾತರಿಪಡಿಸಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಮೆಟ್ರೋ ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಇಷ್ಟೆಲ್ಲಾ ಯೋಜನೆಗಳ ಫಲಾನುಭವಿಗಳಾದ ನೀವು ಬಿಜೆಪಿ ಬದಲು ಕಾಂಗ್ರೆಸ್ ಅಥವಾ ಬಿಆರ್ಎಸ್ಗೆ ಮತ ಚಲಾಯಿಸಿದರೆ ಆ ದೇವರು ನಿಮ್ಮನ್ನು ಸ್ವರ್ಗದ ಬದಲು ನರಕಕ್ಕೆ ಕೊಂಡೊಯ್ಯುತ್ತಾನೆ. ನೀವು ಸ್ವರ್ಗಕ್ಕೆ ಹೋಗಬೇಕಾದರೆ ದೇಶಕ್ಕೆ ಸೇವೆ ಸಲ್ಲಿಸುತ್ತಿರುವವರಿಗೆ ಬೆಂಬಲಿಸಿ ಮತ ಹಾಕಿ ಇಲ್ಲದಿದ್ದರೆ ಆ ದೇವರು ನಿಮ್ಮನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲಾ ಹಿಂದೂಗಳು ಒಗ್ಗಟ್ಟಾಗಿ ಬಿಜೆಪಿಗೆ ಮತ ಚಲಾಯಿಸಿ, ಹಿಂದೂ ಸಮಾಜದಲ್ಲಿದ್ದುಕೊಂಡು ಬಿಜೆಪಿಯನ್ನು ಬೆಂಬಲಿಸದವರೇ ನಿಜವಾದ ದೇಶದ್ರೋಹಿಗಳು ಎಂದು ವೈರಲ್ ಆಗಿರುವ ವಿಡಿಯೋದಲ್ಲಿ ಸಂಸದ ಅರವಿಂದ್ ಹೇಳುತ್ತಿರುವುದನ್ನು ನೋಡಬಹುದಾಗಿದೆ.