

ವಿಜಯಪುರ: ಜಿಲ್ಲೆಯಲ್ಲಿ ವಾಂತಿ-ಭೇದಿ ಸಮಸ್ಯೆ ಉಲ್ಬಣಿಸಿದ್ದು, ಇದುವರೆಗೆ 70ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾದಂತಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾತನೂರು ಗ್ರಾಮದಲ್ಲಿ ಜನರು ವಾಂತಿ-ಭೇದಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ನಿನ್ನೆ ಬೆಳಗ್ಗೆಯಿಂದ ಗ್ರಾಮದ ಜನರಲ್ಲಿ ಕಾಣಿಸಿಕೊಂಡ ವಾಂತಿ-ಭೇದಿ ಸಮಸ್ಯೆ ಇಂದು ಉಲ್ಬಣಿಸಿದ್ದರಿಂದ ಭೀತಿಗೊಂಡ ಜನರು ಆಸ್ಪತ್ರೆಗೆ ದಾಖಲಾಗಲಾರಂಭಿಸಿದ್ದಾರೆ. ಇಂಡಿ ತಾಲೂಕಾಸ್ಪತ್ರೆಯಲ್ಲಿ 42 ಹಾಗೂ ಇತರ ಖಾಸಗಿ ಆಸ್ಪತ್ರೆಗಳಲ್ಲಿಯೂ 30ರಿಂದ 40 ಜನರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಮಸ್ಯೆಗೆ ಕಾರಣ ಏನು ಎಂಬುದು ಇನ್ನೂ ಖಚಿತವಾಗಿ ತಿಳಿದುಬರದಿದ್ದರೂ ಕುಡಿಯುವ ನೀರಿನಿಂದ ಸಮಸ್ಯೆ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಪೂರೈಕೆಯಾಗುವ ಕುಡಿಯುವ ನೀರನ್ನು ವಿಜಯಪುರ ನಗರದ ಪರೀಕ್ಷಾಲಯಕ್ಕೆ ಕಳುಹಿಸಲಾಗಿದೆ.
ಇಂಡಿ ತಾಲೂಕಾಸ್ಪತ್ರೆಗೆ ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ್ ಭೇಟಿ ನೀಡಿದ್ದು, ವಾಂತಿ-ಬೇಧಿಯಿಂದ ಬಳಲುತ್ತಿರುವ ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದಾರೆ. ಸೂಕ್ತ ಚಿಕಿತ್ಸೆ ನೀಡಬೇಕು. ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ವೈದ್ಯರಿಗೆ ಸೂಚನೆ ನೀಡಿದ್ದಲ್ಲದೆ, ಸಮಸ್ಯೆಗೆ ನಿಖರ ಕಾರಣ ಕಂಡುಕೊಳ್ಳಲು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.