ಮಗಳು ಮಸಾಬ ಮದುವೆಗೆ ಭಾರತಕ್ಕೆ ಬಂದ ಕ್ರಿಕೆಟಿಗ ವಿವಿಯನ್​ ರಿಚರ್ಡ್ಸ್​ …

Vivian Richards - Masaba Gupta
Published on

ಮುಂಬೈ: ನಟಿ ಮತ್ತು ಫ್ಯಾಶನ್​ ಡಿಸೈನರ್​ ಮಸಾಬ ಗುಪ್ತ ತಮ್ಮ ಗೆಳೆಯ ಸತ್ಯದೀಪ್​ ಮಿಶ್ರ ಜತೆಗೆ ಶುಕ್ರವಾರ ಮದುವೆಯಾಗಿದ್ದಾರೆ. ವಿಶೇಷವೆಂದರೆ, ಈ ಮದುವೆಗೆ ಮಸಾಬ ತಂದೆ ಮತ್ತು ಖ್ಯಾತ ಕ್ರಿಕೆಟಿಗ ವಿವಿಯನ್​ ರಿಚರ್ಡ್ಸ್​ ವೆಸ್ಟ್​ ಇಂಡೀಸ್​ನಿಂದ ಬಂದು ಭಾಗವಹಿಸಿದ್ದರು.

80ರ ದಶಕದಲ್ಲಿ ವಿವಿಯನ್​ ರಿಚರ್ಡ್ಸ್​, ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡದ ನಾಯಕನಾಗಿದ್ದರು. ಟೂರ್ನಿಯೊಂದರಲ್ಲಿ ಭಾಗವಹಿಸುವುದಕ್ಕೆ ಭಾರತಕ್ಕೆ ಬಂದ ಸಂದರ್ಭದಲ್ಲಿ ನಟಿ ನೀನಾ ಗುಪ್ತ ಅವರೊಂದಿಗೆ ಪ್ರೇಮಾಂಕುರವಾಗಿತ್ತು. ನೀನಾ ಗುಪ್ತ, ರಿಚರ್ಡ್ಸ್​ ಅವರನ್ನು ಅಧಿಕೃತವಾಗಿ ಮದುವೆಯಾಗದಿದ್ದರೂ, ಅವರಿಬ್ಬರೂ ಮಸಾಬ ಎಂಬ ಹೆಣ್ಣುಮಗುವಿಗೆ ತಂದೆ-ತಾಯಿಯಾಗಿದ್ದರು. ಆ ನಂತರ ರಿಚರ್ಡ್ಸ್​, ವೆಸ್ಟ್​ ಇಂಡೀಸ್​ಗೆ ಹೊರಟು ಹೋದರು. ನೀನಾ ಸಿಂಗಲ್​ ಮದರ್​ ಆಗಿ ಮಸಾಬ ಅವರನ್ನು ಬೆಳೆಸಿದರು.

ಮಸಾಬಾ ಬೆಳೆದು ದೊಡ್ಡವರಾದ ಮೇಲೆ ಫ್ಯಾಶನ್​ ಡಿಸೈನರ್​ ಆಗಿ ಗುರುತಿಸಿಕೊಂಡರು. 'ಮಸಾಬ ಮಸಾಬ' ಎಂಬ ವೆಬ್​ಸೀರೀಸ್​ನಲ್ಲೂ ನಟಿಸಿದ್ದರು. ನಿರ್ಮಾಪಕ ಮಧು ಮಂಟೇನಾ ಜತೆಗೆ ಮದುವೆಯೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಆ ಮದುವೆ ಮುರಿದು ಬಿದ್ದಿತ್ತು. ಈಗ ಸತ್ಯದೀಪ್​ ಮಿಶ್ರ ಎಂಬ ನಟನ ಜತೆಗೆ ಅವರಿಗೆ ಮದುವೆಯಾಗಿದೆ. ಈ ಮದುವೆಗೆ ರಿಚರ್ಡ್ಸ್​ ಅಷ್ಟೇ ಅಲ್ಲ, ಮಸಾಬ ತಾಯಿ ನೀನಾ ಮತ್ತು ಆಕೆಯ ಪತಿ ವಿವೇಕ್​ ಮೆಹ್ರಾ ಸಹ ಹಾಜರಿದ್ದರು.

ಮದುವೆಯ ನಂತರ ರಿಸೆಪ್ಶನ್​ ಸಹ ಆಯೋಜಿಸಲಾಗಿದ್ದು, ಈ ಆರತಕ್ಷತೆಯಲ್ಲಿ ಸೋನಂ ಕಪೂರ್​, ದಿಯಾ ಮಿರ್ಜಾ, ಕೊಂಕಣ ಸೇನ್​ ಶರ್ಮ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಹ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net