ಸೀಬೆ ಬೆಳೆದ ಇಂಜಿನಿಯರ್!

Seebe
Published on
ವಿಜಯಪುರ ಜಿಲ್ಲೆ ಕಾಖಂಡಕಿ ಗ್ರಾಮದ ಶಿವಾನಂದ ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕ್ವಾಲಿಟಿ ಇಂಜಿನಿಯರ್ ಮ್ಯಾನೇಜರ್ ಆಗಿದ್ದಾರೆ. ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದ್ದರಿಂದ ಕೃಷಿಯಲ್ಲೂ ಸಾಧನೆ ಮಾಡಬೇಕೆಂಬ ಹಂಬಲದಿಂದ ಪೇರು ಬೆಳೆಯಲು ಮುಂದಾಗಿದ್ದಾರೆ.

| ಸಚಿನ್ ಕೆ. ದೇಸಾಯಿ ವಿಜಯಪುರ

ರಾಜಧಾನಿ ಬೆಂಗಳೂರಿನಲ್ಲೆ ಕುಳಿತು ತಮ್ಮೂರಿನ ಜಮೀನಿನಲ್ಲಿ ವಿದೇಶಕ್ಕೂ ಕಳುಹಿಸಬಹುದಾದ ಗುಣಮಟ್ಟದ ಹಣ್ಣುಗಳನ್ನು ಬೆಳೆದ ಸಾಫ್ಟ್​ವೇರ್ ಇಂಜಿನಿಯರ್ ಯಶೋಗಾಥೆ ಇದು. ಹಲವು ಸವಾಲುಗಳನ್ನು ಮೆಟ್ಟಿ ನಿಂತು ಕೃಷಿಗೆ ಮುಂದಾದ ವಿಜಯಪುರ ಜಿಲ್ಲೆಯ ಕಾಖಂಡಕಿ ಗ್ರಾಮದ ಶಿವಾನಂದ ಸುನಗದ ಇತರ ರೈತರಿಗೂ ಮಾದರಿಯಾಗಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಬೆಂಗಳೂರಿನಿಂದ ಗ್ರಾಮಕ್ಕೆ ಮರಳಿದ್ದ ಶಿವಾನಂದ, ನೀರಿನ ಕೊರತೆಯಿಂದ ಸಂಪೂರ್ಣ ಪಾಳುಬಿದ್ದಂತಾಗಿದ್ದ ಹೊಲದ ಚಿತ್ರಣವನ್ನೇ ಬದಲಿಸಿ ಒಂದು ಎಕರೆ ಜಮೀನಿನಲ್ಲಿ 800 ಸೀಬೆ(ಪೇರು) ಸಸಿಗಳನ್ನು ತಂದು ನೆಟ್ಟು, ಪೋಷಣೆ ಮಾಡಿದ್ದರು. ಸದ್ಯ ಅವು ಆಳೆತ್ತರ ಬೆಳೆದು ಹಣ್ಣುಗಳನ್ನು ತುಂಬಿಕೊಂಡು ನಿಂತಿವೆ. ಕಟಾವು ಕೂಡ ಮಾಡಲಾಗಿದ್ದು, ರುಚಿಯಾದ ಹಣ್ಣುಗಳಿಗೆ ಅಪಾರ ಬೇಡಿಕೆಯೂ ಇದೆ.

ನೆಟ್ ನೋಡಿ ನೆಟ್ ಬಳಕೆ: ಹಣ್ಣುಗಳು ಬೆಳೆವಣಿಗೆ ಹಂತದಲ್ಲಿ ಕೀಟಗಳ ಬಾಧೆ ತಡೆಯಲು ಏನು ಕ್ರಮ ಕೈಗೊಳ್ಳಬಹುದು ಎಂದು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಶಿವಾನಂದ ಅವರಿಗೆ ನೆಟ್ ಬಳಕೆ ಬಗ್ಗೆ ಮಾಹಿತಿ ಸಿಕ್ಕಿದೆ. ಇಷ್ಟೊತ್ತಿಗಾಗಲೇ ಅವರು ಬೆಂಗಳೂರಿಗೆ ಮರಳಿದ್ದರಿಂದ ಮಹಾರಾಷ್ಟ್ರದ ಮಿರಜ್​ನಲ್ಲಿ 70 ಪೈಸೆಗೊಂದರಂತೆ ಲಭಿಸಿದ ನೆಟ್​ಗಳನ್ನು ಆನ್​ಲೈನ್ ಮೂಲಕವೇ ತರಿಸಿಕೊಂಡು ವಿಡಿಯೋ ಕಾಲ್ ಮೂಲಕ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಜಕ್ಕಪ್ಪನಿಗೆ ನೆಟ್ ಹಾಕುವ ಬಗ್ಗೆ ತಿಳಿಸಿದ್ದಾರೆ. ಪ್ರತಿ ಹಣ್ಣಿಗೂ ನೆಟ್, ಒಂದು ಕವರ್ ಹಾಕಿದ್ದರಿಂದ ಕೀಟಗಳ ಬಾಧೆ ಸಂಪೂರ್ಣ ತಡೆಯಲಾಗಿದೆ. ನೆಟ್ ಬಳಕೆಯಿಂದ ಹಣ್ಣಿಗೆ ಉತ್ತಮ ಶೇಪ್ ಕೂಡ ದೊರೆತಿದ್ದು, ಹೆಚ್ಚು ಬಿಸಿಲು ತಾಕದೆ ಹಣ್ಣಿನ ಮೇಲ್ಪದರು ನುಣುಪಾಗಿ ಆಕರ್ಷಕವಾಗಿದೆ. ಕೀಟಗಳು ಬರದಿರಲಿ ಎಂದು ಸ್ಟಿಕ್ಕಿ ಪೇಪರ್​ಗಳನ್ನೂ ಬಳಸಲಾಗಿದೆ.

ಬೆಳೆದದ್ದು ಹೀಗೆ: ಹಾಳು ಬಿದ್ದಿದ್ದ ಭೂಮಿಯನ್ನು ಹದ ಮಾಡಿಕೊಂಡು ಪೇರು ಹಣ್ಣು ಬೆಳೆಯಲು ಮುಂದಾದರು. ಮೊದಲು ಮಣ್ಣು ಪರೀಕ್ಷೆ ಮಾಡಿಸಿ ತಮ್ಮ ಭೂಮಿಯಲ್ಲಿ ಉತ್ತಮವಾಗಿ ಬೆಳೆಯಬಹುದಾದ ಜಿ-ವಿಲಾಸ್ ತಳಿಯ ಸಸಿಗಳನ್ನು ಮಹಾರಾಷ್ಟ್ರದ ನಾಸಿಕ್​ನಿಂದ ತರಿಸಿಕೊಂಡು, ಸಸಿಯಿಂದ ಸಸಿಗೆ 5 ಅಡಿ ಹಾಗೂ ಎರಡು ಸಾಲುಗಳ ನಡುವೆ 9 ಅಡಿ ಅಂತರದಲ್ಲಿ ನೆಟ್ಟಿದ್ದಾರೆ. ಪಕ್ಕದಲ್ಲೇ ಕೃಷಿ ಹೊಂಡ ನಿರ್ವಿುಸಿಕೊಂಡು ಸಸಿಗಳಿಗೆ ಅಗತ್ಯಕ್ಕೆ ತಕ್ಕಂತೆ ಹನಿ ನೀರಾವರಿ ಮೂಲಕ ನೀರು ಪೂರೈಸುತ್ತಿದ್ದಾರೆ. ಹಣ್ಣುಗಳು ಬೆಳೆದಾಗ ಕೀಟಬಾಧೆ ತಡೆಯಲು 300 ಚೆಂಡು ಹೂ ಸಸಿಗಳನ್ನು ತಂದು ಅಲ್ಲಲ್ಲಿ ನೆಟ್ಟಿದ್ದಾರೆ. ಯಾವುದೇ ರಾಸಾಯನಿಕ ಬಳಸದೆ ಕೇವಲ ಕುರಿ ಗೊಬ್ಬರ ಹಾಕಿದ್ದು, ಸದ್ಯ ಒಂದೊಂದು ಗಿಡದಲ್ಲಿ ಅಂದಾಜು ನೂರು ಕಾಯಿ ಬಿಡುತ್ತಿದೆ. ಕಾಯಿಗಳ ಭಾರಕ್ಕೆ ಟೊಂಗೆಗಳು ಬಾಗದಿರಲಿ ಹಾಗೂ ಹಣ್ಣುಗಳ ಗುಣಮಟ್ಟ ಚೆನ್ನಾಗಿರಲಿ ಎಂದು ಅರ್ಧದಷ್ಟು ಕಾಯಿಗಳನ್ನು ಮಾತ್ರ ಗಿಡದಲ್ಲಿ ಉಳಿಸಲಾಗುತ್ತಿದೆ. ನೂರು ಕೆಜಿಯಂತೆ ಆರು ಬಾರಿ ಹಣ್ಣುಗಳನ್ನು ಕಿತ್ತು ಈಗಾಗಲೆ ಮಾರುಕಟ್ಟೆಗೆ ಸಾಗಿಸಲಾಗಿದೆ. ವರ್ಷಕ್ಕೆ ಎರಡು ಬಾರಿ ಹಣ್ಣು ನೀಡುವ ಗಿಡಗಳಿಂದ ಒಟ್ಟು 1.5 ಟನ್ ಹಣ್ಣು ಬೆಳೆಯುವ ನಿರೀಕ್ಷೆ ಇದೆ. ಪ್ರತಿ ಕೆಜಿಗೆ 40 ರೂ. ನಂತೆ ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿರುವ ಇಂಜಿನಿಯರ್ ಮತ್ತು ಹಳ್ಳಿಗಳಲ್ಲಿರುವ ರೈತರ ನಡುವೆ ತುಂಬಾ ವ್ಯತ್ಯಾಸವಿರುತ್ತದೆ ಎಂಬ ತಪ್ಪು ಕಲ್ಪನೆ ರೈತರಲ್ಲಿರುತ್ತದೆ. ಒಬ್ಬ ಇಂಜಿನಿಯರ್ ಕೂಡ ಕೃಷಿಯನ್ನು ಇಷ್ಟಪಡುತ್ತಾನೆ ಎಂಬುದನ್ನು ತಿಳಿಸಲು ಪೇರು ಬೆಳೆಯಲು ಮುಂದಾಗಿದ್ದೇನೆ. ಇದರಿಂದ ಹೆಚ್ಚು ಲಾಭ ಪಡೆಯಬೇಕೆಂಬ ಉದ್ದೇಶ ನನಗಿಲ್ಲ. ಈ ಕಾರ್ಯ ರೈತರಿಗೆ ಸ್ಪೂರ್ತಿಯಾದರೆ ನನ್ನ ಶ್ರಮ ಸಾರ್ಥಕವಾದಂತೆ. | ಶಿವಾನಂದ ಸುನಗದ ಕಾಖಂಡಕಿ ರೈತ

ವಿಭಿನ್ನ ತಳಿಗಳು: ಪೇರುಗಳಲ್ಲಿ ಅಲಹಾಬಾದ್ ಸಫೇದ್, ತೈವಾನ್ ಪಿಂಕ್ ಮತ್ತು ವೈಟ್, ವಿಎನ್​ಆರ್, ಜಿ-ಮಿಲನ್ ಹಾಗೂ ನಾಟಿ ತಳಿಗಳಿವೆ. ಹೆಚ್ಚು ಇಳುವರಿ ಬರುತ್ತದೆ ಎಂದು ಈ ಭಾಗದಲ್ಲಿ ರೈತರು ಸಾಮಾನ್ಯವಾಗಿ ವಿಎನ್​ಆರ್ ತಳಿ ಬೆಳೆಯುತ್ತಾರೆ. ಆದರೆ ನಾವು ಗುಣಮಟ್ಟಕ್ಕೆ ಆದ್ಯತೆ ನೀಡಿ ಜಿ-ಮಿಲನ್ ತಳಿ ಹಣ್ಣು ಬೆಳೆದಿದ್ದೇವೆ. ಇದು ಲಕನೌ-49 ಎಂಬ ತಳಿಯ ಸುಧಾರಿತ ತಳಿಯಾಗಿದ್ದು, ಹಣ್ಣುಗಳು ಕಡಿಮೆ ಬಂದರೂ ಗುಣಮಟ್ಟ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಇದನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಶಿವಾನಂದ.

ಟೇಸ್ಟ್ ಕೂಡ ಬೆಸ್ಟ್: ಬೆಂಗಳೂರು ಹಾಗೂ ಮಹಾರಾಷ್ಟ್ರದಲ್ಲಿ ಈ ಹಣ್ಣುಗಳಿಗೆ ಉತ್ತಮ ಬೇಡಿಕೆ ಬಂದಿದ್ದು, ಖಾಸಗಿ ಮಾಲ್​ಗಳ ಗುಣಮಟ್ಟ ಪರೀಕ್ಷೆಯಲ್ಲೂ ಹಣ್ಣು ಸೈ ಎನಿಸಿಕೊಂಡಿವೆ. ಬೆಂಗಳೂರಿನ ಎಂ ವರ್ಕ್ಸ್ ಆರ್ಗ್ಯಾನಿಕ್ ಫ್ರುಟ್ ಸೇಲ್ ಸಂಸ್ಥೆಯೂ ಹಣ್ಣುಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಮ್ಮೆ ಕಿತ್ತ ಹಣ್ಣು ಒಂದು ವಾರದವರೆಗೆ ತಾಳಿಕೆ ಬರುತ್ತಿದ್ದು, ಇಲ್ಲಿಂದ ದುಬೈ ಹಾಗೂ ಕತಾರ್​ಗೂ ಕಳುಹಿಸಲಾಗುತ್ತಿದೆ ಎಂದು ಶಿವಾನಂದ ಮಾಹಿತಿ ಹಂಚಿಕೊಂಡಿದ್ದಾರೆ.

ಗ್ರೀನ್ ಟೀಗೆ ಎಲೆಗಳ ಬಳಕೆ: ಪೇರು ಗಿಡದ ಎಲೆಗಳಿಂದಲೂ ಆದಾಯ ಪಡೆಯಬಹುದು ಎಂಬುದು ಗಮನಾರ್ಹ. ಇದರ ಎಲೆಗಳ ಪುಡಿಯನ್ನು ಗ್ರೀನ್ ಟೀಯಲ್ಲಿ ಬಳಸಲಾಗುತ್ತಿದ್ದು, 100 ಗ್ರಾಂ ಪುಡಿಗೆ 145ರೂ. ಬೆಲೆ ಇದೆ. ಸೀಬೆ ಗಿಡದ ಎಲೆಗಳನ್ನು ಸಂಪೂರ್ಣ ಒಣಗಿಸಿ ಮನೆಯಲ್ಲಿ ಬಳಸುವ ಮಿಕ್ಸರ್​ನಲ್ಲೇ ಒಣಗಿದ ಎಲೆಗಳನ್ನು ಪುಡಿಮಾಡಿ ಟೀ ಕಂಪನಿಗೆ ನೀಡಬಹುದು. ನಮ್ಮ ಜಮೀನಿನಲ್ಲಿ ಬೆಳೆದ 800 ಗಿಡಗಳ ಎಲೆಗಳನ್ನು ಒಣಗಿಸಿ ಪುಡಿ ಮಾಡಿದರೆ ಅಂದಾಜು 200 ಕೆಜಿ ಪುಡಿ ಉತ್ಪಾದಿಸಬಹುದಾಗಿದೆ. ಅದರಲ್ಲಿ ಸ್ವಲ್ಪ ಪ್ರಮಾಣವನ್ನು ಗ್ರೀನ್ ಟೀ ಉತ್ಪಾದನೆಗೆ ನೀಡಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಶಿವಾನಂದ. ಆಸಕ್ತರು ಮಾಹಿತಿಗೆ ಶಿವಾನಂದ ಅವರನ್ನು ಮೊ.9945686937 ಸಂರ್ಪಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net