ತಾಲೂಕು ಆಸ್ಪತ್ರೆಗೆ ರಕ್ಷಾ ಸಮಿತಿ ಸದಸ್ಯರ ಭೇಟಿ

Bel_Raksha Samiti
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ನೂತನವಾಗಿ ಆಯ್ಕೆಯಾದ ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕು ಆಸ್ಪತ್ರೆಗೆ ಸಂಬಂಧಿಸಿದ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಲಾಯಿತು.

ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿರುವ 12 ಯಂತ್ರಗಳ ಪೈಕಿ 1 ಯಂತ್ರ ಕೆಟ್ಟು ಹೋಗಿ ತಿಂಗಳಾದರೂ ರಿಪೇರಿ ಮಾಡದ ಬಗ್ಗೆ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಡಯಾಲಿಸಿಸ್ ಯಂತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ಹೊರಗಡೆ ಬೇಕಾಬಿಟ್ಟಿ ಇಟ್ಟಿರುವ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಾಗ ಸ್ಟಾಕ್ ರೂಮ್‌ನ ಕೊರತೆಯಿಂದ ಹೊರಗಡೆ ಇಡಬೇಕಾದ ಅನಿವಾರ್ಯ ಪರಿಸ್ಥಿತಿ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದರು. ಡಯಾಲಿಸಿಸ್ ಕೇಂದ್ರದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಜನರ ಆರೋಗ್ಯ ಕಾಪಾಡಬೇಕಾದ ತಾಲೂಕು ಆಸ್ಪತ್ರೆಯ ಸುತ್ತಮುತ್ತ ಬೆಳೆದಿರುವ ಹುಲ್ಲು, ಗಿಡಗಂಟಿಗಳನ್ನು ಕಡಿದು ಸ್ವಚ್ಛ ಮಾಡದ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ಒಂದು ವಾರದೊಳಗೆ ಸ್ವಚ್ಛಗೊಳಿಸಲು ತಿಳಿಸಲಾಯಿತು. ಆಸ್ಪತ್ರೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಸಲು ಸೂಚಿಸಲಾಯಿತು. ಕೆಲವೊಂದು ವೈದ್ಯರು ಖಾಸಗಿ ಕ್ಲಿನಿಕ್ ಹೊಂದಿದ್ದು, ರೋಗಿಗಳನ್ನು ತಮ್ಮ ಕ್ಲಿನಿಕ್‌ಗಳಿಗೆ ಬರಲು ಹೇಳುವುದು, ಔಷಧ ಚೀಟಿಗಳನ್ನು ಖಾಸಗಿ ಮೆಡಿಕಲ್‌ಗಳಿಗೆ ನೀಡುವುದು. 108 ಅಂಬುಲೆನ್ಸ್ ಲಭ್ಯವಾಗದ ಸಂದರ್ಭ ಸರ್ಕಾರಿ ಅಂಬುಲೆನ್ಸ್ ಇದ್ದರೂ ಖಾಸಗಿ ಅಂಬುಲೆನ್ಸ್‌ಗಳಲ್ಲಿ ರೋಗಿಗಳನ್ನು ಕಳುಹಿಸುವುದು. ರೋಗಿಗಳನ್ನು ಸರಿಯಾಗಿ ಪರೀಕ್ಷೆ ಮಾಡದೇ ಔಷಧ ನೀಡುವುದು, ರಕ್ತ ಪರೀಕ್ಷೆ ಸಂದರ್ಭ ಬೇಜವಾಬ್ದಾರಿ ವರ್ತನೆ ಬಗ್ಗೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ಅವರ ಗಮನಕ್ಕೆ ತರಲಾಯಿತು. 10 ದಿನಗಳ ನಂತರ ಮತ್ತೊಮ್ಮೆ ಭೇಟಿ ನೀಡುವ ಸಂದರ್ಭ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನವೀನ್ ಗೌಡ ಸವಣಾಲು, ಪಿ.ಟಿ.ಸಭಾಸ್ಟಿಯನ್ ಕಳೆಂಜ, ಸವಿತಾ ಕೊರಗ ಅಟ್ರಿಂಜೆ, ವೀರೇಂದ್ರ ಕುಮಾರ್ ಜೈನ್ ಅಳದಂಗಡಿ, ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಬೆಳಾಲು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಬ್ದುಲ್ ಗಫೂರು ಪುದುವೆಟ್ಟು, ಜೀತಮುಕ್ತ ನಿರ್ಮೂಲನ ಸಮಿತಿ ಸದಸ್ಯ ಶೇಖರ್ ಲಾಯಿಲ, ತಾಲೂಕು ಆರೋಗ್ಯಾಧಿಕಾರಿ ಇಲಾಖೆ ಅಜಯ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net