ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಕೂಲ್ ಎಂದೇ ಹೆಸರುವಾಸಿಯಾಗಿದ್ದಾರೆ. ಮೈದಾನದ ಒಳಗೂ ಹಾಗೂ ಹೊರಗೂ ಅವರು ಕೋಪ ಮಾಡಿಕೊಂಡಿರುವ ಘಟನೆಗಳು ತೀರಾ ಕಡಿಮೆ. ಎಂಥಾ ಸನ್ನಿವೇಶವಿದ್ದರೂ ಅದನ್ನು ಕೂಲ್ ಆಗಿ ಹ್ಯಾಂಡಲ್ ಮಾಡುವ ಧೋನಿ ಈ ಹಿಂದೆ ಐಪಿಎಲ್ ಸಮಯದಲ್ಲಿ ಒಮ್ಮೆ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡಿದ್ದರು. ಈ ಘಟನೆ ಪರ-ವಿರೋಧದ ಚರ್ಗೆ ದಾರಿ ಮಾಡಿಕೊಟ್ಟಿತ್ತು.
ಏಕೆಂದರೆ 2019ರಲ್ಲಿ ನಡೆದ ಐಪಿಎಲ್ ಟೂರ್ನಿಯ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆನ್ಫೀಲ್ಡ್ ಅಂಪೈರ್‌ಗಳ ನೋ ಬಾಲ್ ನಿರ್ಧಾರದಿಂದ ಕುಪಿತಗೊಂಡಿದ್ದ ಕ್ಯಾಪ್ಟನ್ ಕೂಲ್ ಮಾತಿನ ಚಕಮಕಿ ನಡೆಸಿದ್ದರು. ನಂತರ ವಾಕಿ ಟಾಕಿಯಲ್ಲಿ ನಾಲ್ಕನೇ ಅಂಪೈರ್‌ಗಳ ಜೊತೆ ಕೂಡ ಅಂದಿನ ಸಿಎಸ್‌ಕೆ ನಾಯಕ ಮಾತನಾಡಿದ್ದರು. ಸದಾ ತಾಳ್ಮೆಯಿಂದ ಇರುತ್ತಿದ್ದ ಎಂಎಸ್ ಧೋನಿ ಅವರನ್ನು ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಇದರಿಂದಾಗಿ ಎಂಎಸ್ ಧೋನಿ ಅಂದು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಇನ್ನೂ ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಧೋನಿ ವಿರುದ್ಧ ಕಿಡಿಕಾರಿದ್ದಾರೆ.
ಕ್ರಿಕ್ಬಜ್ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸೆಹ್ವಾಗ್, ಅಂದು ಧೋನಿಯ ನಡೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದರಿಂದ ಅವರು ಸುಲಭವಾಗಿ ಹೊರಬಂದರು. ನನ್ನ ಪ್ರಕಾರ ಧೋನಿಯನ್ನು ಎರಡು ಮೂರು ಪಂದ್ಯಗಳಿಂದ ಬ್ಯಾನ್ ಮಾಡಬೇಕಿತ್ತು. ಏಕೆಂದರೆ ಧೋನಿ ಮಾಡಿರುವುದನ್ನು, ನಾಳೆ ಇನ್ನೊಬ್ಬ ನಾಯಕ ಮಾಡಬಹುದು.
ಇದನ್ನೂ ಓದಿ: ಸಾವಿನಲ್ಲೂ ಒಂದಾದ ದಂಪತಿ; ಹೃದಯಾಘಾತಕ್ಕೆ ಇಬ್ಬರು ಬಲಿ
ಹಾಗಾದರೆ ಅಂಪೈರ್‌ಗಳ ಮೌಲ್ಯ ಏನು. ಕೆಲ ಪಂದ್ಯಗಳಿಗೆ ಅವರನ್ನು ಬ್ಯಾನ್ ಮಾಡುವ ಮೂಲಕ ಐಪಿಎಲ್ ಉತ್ತಮ ನಿದರ್ಶನವನ್ನು ಎಲ್ಲರಿಗೂ ಕೊಡಬೇಕಾಗಿತ್ತು. ಅವರು ಅಂದು ವಾಕಿ ಟಾಕಿಯಲ್ಲಿ ನಾಲ್ಕನೇ ಅಂಪೈರ್ ಜೊತೆ ಮಾತನಾಡುವುದಕ್ಕಿಂತ ಹೊರಗಡೆ ನಿಲ್ಲಬೇಕಾಗಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ ಎಂದು ವೀರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ.
ಶೇ. 50ರಷ್ಟು ದಂಡ
ಅಂದು ಎಂಎಸ್ ಧೋನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ, ಪಂದ್ಯದ ಸಂಭಾವನೆಯಲ್ಲಿ ಶೇ 50 ರಷ್ಟು ದಂಡವನ್ನು ವಿಧಿಸಲಾಗಿತ್ತು. ಅಂದಿನ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಗೆಲುವು ಪಡೆದಿತ್ತು. ಈ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ ಒಂದು ರನ್‌ನಿಂದ ಸೋಲು ಅನುಭವಿಸಿತ್ತು.