ಆತ ನೀಡಿದ ಸಲಹೆಯೇ ಟೆಸ್ಟ್ ಸರಣಿಯಲ್ಲಿ ವೇಗಿಗಳಿಗೆ ಹಿನ್ನಡೆಯಾಗಿದ್ದು; Virat Kohli ಕುರಿತು ಶಾಕಿಂಗ್ ಹೇಳಿಕೆ ನೀಡಿದ ಆರ್. ಅಶ್ವಿನ್

Ashwin Kohli
Published on

ಚೆನ್ನೈ: 2024ರ ಡಿಸೆಂಬರ್ ತಿಂಗಳಲ್ಲಿ ಟೀಮ್​ ಇಂಡಿಯಾದ ಲೆಜೆಂಡರಿ ಆಟಗಾರ ಆರ್. ಅಶ್ವಿನ್​ ನಿವೃತ್ತಿ ಘೋಷಿಸುವ ಮೂಲಕ ಕ್ರೀಡಾ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು. ಆಧುನಿಕ ಯುಗದ ಬ್ಯಾಟರ್​ಗಳಿಗೆ ನಡುಕ ಹುಟ್ಟಿಸಿದ್ದ ಆರ್. ಅಶ್ವಿನ್​ ಆಗಿಂದಾಗೆ ಕ್ರಿಕೆಟ್​ಗೆ ಸಂಬಂಧಿಸಿದ ವಿಚಾರಗಳನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್ ಸರಣಿಯ ವೇಳೆ ವಿರಾಟ್​ ಕೊಹ್ಲಿ (Virat Kohli) ನೀಡಿದ ಸಲಹೆಯೇ ಬೌಲರ್​ಗಳಿಗೆ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣವಾಯಿತು ಎಂದು ಹೇಳಿದ್ದಾರೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅಶ್ವಿನ್​, ಬೌಲಿಂಗ್ ಮತ್ತು ವಿಕೆಟ್​ ತೆಗೆಯುವ ಸಾಮರ್ಥ್ಯದ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ. ವೇಗಿ ಆಕಾಶ್​ದೀಪ್​ಗೆ ಕೊಹ್ಲಿ (Virat Kohli) ನೀಡಿದ ಸಲಹೆಯೇ ಹೇಗೆ ಹಿನ್ನಡೆಯಾಗಿ ಪರಿಣಮಿಸಿತು ಎಂಬುದರ ಬಗ್ಗೆ ಅಶ್ವಿನ್​ ಮಾತನಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಗಾಬಾ ಟೆಸ್ಟ್​ ಪಂದ್ಯದಲ್ಲಿ ಆಕಾಶ್​ದೀಪ್ ಅತ್ಯುತ್ತಮ ಬೌಲಿಂಗ್ ಮಾಡಿದರು ಎಂದರೆ ತಪ್ಪಾಗಲಾರದು. ನಾನು ಹೊರಗಿನಿಂದ ಪಂದ್ಯವನ್ನು ವೀಕ್ಷಿಸುತ್ತಿದೆ. ವಿರಾಟ್​ (Virat Kohli) ಆತನ ಬಳಿ ಹೋಗಿ ಮಾತನಾಡುವುದನ್ನು ನಾನು ನೋಡಿದೆ. ತಕ್ಷಣವೇ ಒಬ್ಬ ಫೀಲ್ಡರ್ ಹೊರಬಂದರು ಆ ಬಳಿಕ ಆಕಾಶ್​ದೀಪ್ ಲಯ ತಪ್ಪಲು ಶುರುವಾಯಿತು.

ಸ್ಟೀವ್​ ಸ್ಮಿತ್​ನಂತಹ ಬ್ಯಾಟ್ಸ್​​ಮನ್​ ಎದುರು ಈ ರೀತಿ ಬೌಲಿಂಗ್ ಮಾಡಿದಾಗ ಅದು ತಂಡಕ್ಕೆ ಹಿನ್ನಡೆಯಾಗುತ್ತದೆ. ಒಬ್ಬ ಬೌಲರ್​ನನ್ನು ನಾವು ಅರ್ಥಮಾಡಿಕೊಂಡಾಗ ಆತನಿಗೆ ತನ್ನ ಆಟ ಆಡಲು ಬಿಡಬೇಕು. ಆತ ಸರಿಯಾದ ದಾರಿಯಲ್ಲಿ ಹೋಗತ್ತಿರುವಾಗ ನಾವು ಏನಾದರೂ ಸಲಹೆ ನೀಡಿದರೆ ಆತ ಲಯ ತಪ್ಪುತ್ತಾನೆ ಆಕಾಶ್​ದೀಪ್ ವಿಚಾರದಲ್ಲೂ ಕೂಡ ಇದೇ ಆಗಿದ್ದು ಎಂದು ಟೀಮ್​ ಇಂಡಿಯಾ ಮಾಜಿ ಆಟಗಾರ ಆರ್​. ಅಶ್ವಿನ್​ ಅಭಿಪ್ರಾಯಪಟ್ಟಿದ್ದಾರೆ. 

ಅಂದಹಾಗೆ ಅಶ್ವಿನ್​ (R Ashwin) ಅವರು 106 ಟೆಸ್ಟ್‌ ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್‌ಗಳನ್ನು ಪಡೆದು ಟೆಸ್ಟ್​ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿರುವ ಟೀಮ್​ ಇಂಡಿಯಾದ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಬಳಿಕ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ವೃತ್ತಿ ಬದುಕನ್ನು ಅಶ್ವಿನ್​ ಕೊನೆಗೊಳಿಸಿದರು. ಬೌಲಿಂಗ್​ನಲ್ಲಿ ಮಾತ್ರವಲ್ಲದೆ, ಆರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 3503 ಟೆಸ್ಟ್ ರನ್‌ಗಳನ್ನು ಗಳಿಸಿ, ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ. 3000ಕ್ಕೂ ಹೆಚ್ಚು ರನ್ ಮತ್ತು 300 ವಿಕೆಟ್‌ಗಳೊಂದಿಗೆ 11 ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net