

Delhi: ಆಸ್ಟ್ರೇಲಿಯಾ ವಿರುದ್ಧ (Ind vs Aus) ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರೂ, ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಕುರಿತಾಗಿ ಹತಾಶರಾಗದೆ, ನೈಜ ಆಟದತ್ತ ಗಮನ ಹರಿಸಬೇಕೆಂದು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಸರಣಿಯನ್ನು ಭಾರತ ತಂಡ ಕೈ ಚೆಲ್ಲಿದ್ದು, ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅಭಿಮಾನಿಗಳಲ್ಲಿ ಆತಂಕವನ್ನುಂಟುಮಾಡಿದೆ. ಅಡಿಲೇಡ್ನಲ್ಲಿ ಕೊಹ್ಲಿ ಡಕ್ ಔಟ್ ಆಗುವ ಮೂಲಕ ತಮ್ಮ ಏಕದಿನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸತತ ಎರಡು ಸಲ ಶೂನ್ಯ ಸಾಧನೆ ಮಾಡಿದ ಬೇಡದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಹಿನ್ನಡೆ ನಿವೃತ್ತಿ ಊಹಾಪೋಹಗಳಿಗೆ ರೆಕ್ಕೆ ಪುಕ್ಕ ನೀಡಿದ್ದು, ಸ್ಟಾರ್ ಬ್ಯಾಟರ್ ಕ್ರಿಕೆಟ್ ಭವಿಷ್ಯದ ಕುರಿತಾಗಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಇರ್ಫಾನ್ ಪಠಾಣ್, ಪಂದ್ಯದಲ್ಲಿ ಕೇವಲ ರನ್ ಗಳಿಸುವ ಮನಸ್ಥಿತಿಯಲ್ಲಿ ಆಡುವ ಬದಲು, ಕೊಹ್ಲಿ ಸಂಯಮದಿಂದ, ತಮ್ಮ ನೈಜ ಆಟದತ್ತ ಗಮನ ಹರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಎರಡು ಪಂದ್ಯ, ಎರಡು ಡಕ್, ನಾವು ಈ ಹಿಂದೆ ಈ ರೀತಿಯ ನಿದರ್ಶನಗಳನ್ನು ನೋಡಿಲ್ಲ. ಇದು ಒತ್ತಡ, ಕಿರಿಕಿರಿ ಮತ್ತು ಇನ್ನೇನಾದರು ಬೇರೆ ಕಾರಣದಿಂದ ನಡೆದಿರಬಹುದು. ಹಿರಿಯ ಆಟಗಾರರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ರೀತಿಯ ಮಾತುಗಳು ಅವರ ಆಟದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಹಾಗಾಗದಂತೆ ನಾವು ಜಾಗರೂಕರಾಗಿರಬೇಕು ಎಂದರು. ಅಡಿಲೇಡ್ ಓವಲ್ನಲ್ಲಿ ವಿರಾಟ್ ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲದೇ ವಿಕೆಟ್ ಒಪ್ಪಿಸಿದರು. ಕೊಹ್ಲಿ ಪೆವಿಲಿಯನ್ಗೆ ಹಿಂತಿರುಗುವಾಗ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಲು ಶುರು ಮಾಡಿದರು. ಈ ವೇಳೆ ಸ್ಟಾರ್ ಬ್ಯಾಟರ್ ತಮ್ಮ ಕೈಗವಸುಗಳನ್ನು ಮೇಲಕ್ಕೆತ್ತಿ ಧನ್ಯವಾದ ತಿಳಿಸಿದರು. ಇದು ನಿವೃತ್ತಿಯ ಸುಳಿವೇ ಎಂದು ಅನೇಕರು ಚರ್ಚಿಸುತ್ತಿದ್ದಾರೆ.
ರೋಹಿತ್ ಮತ್ತು ಕೊಹ್ಲಿ ಇಬ್ಬರೂ 2027 ರ ಏಕದಿನ ವಿಶ್ವಕಪ್ ಆಡುವ ಗುರಿ ಇಟ್ಟುಕೊಂಡಿದ್ದು, ಅದರ ಪೂರ್ವಭಾವಿಯಾಗಿ ಸ್ಥಿರ ಪ್ರದರ್ಶನ ನೀಡುವುದು ತುಂಬಾ ಮುಖ್ಯವಾಗಿದೆ. ಈಗಾಗಲೇ ಸರಣಿ ಸೋತಿರುವ ಭಾರತ ತಂಡ, ವೈಟ್ವಾಷ್ ಮುಖಭಂಗದಿಂದ ತಪ್ಪಿಪಿಸಕೊಳ್ಳಲಲು ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಅಕ್ಟೋಬರ್ 25 ರಂದು ಸಿಡ್ನಿ ಮೈದಾನದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಕೊಹ್ಲಿಗೆ ಫಾರ್ಮ್ಗೆ ಮರಳಲು ಮತ್ತೊಂದು ಅವಕಾಶವಿದ್ದು, ಇದು ಅವರ ಮುಂದಿನ ಕ್ರಿಕೆಟ್ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಗಳಿವೆ.(ಏಜೆನ್ಸೀಸ್)