ವೈರಲ್​ ಆಗಿರುವ ಫೋಟೋದಲ್ಲಿರುವುದು ವಿರಾಟ್​ ಕೊಹ್ಲಿ ಪುತ್ರನೇ? ಅಸಲಿ ಸತ್ಯ ತಿಳಿಸಿದ ಕೊಹ್ಲಿ ಸಹೋದರಿ! Virat Kohli

Virat Kohli
Published on

Virat Kohli : ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಫೋಟೋಗಳು ವೈರಲ್​ ಆಗುತ್ತಿವೆ. ಫೋಟೋಗಳಲ್ಲಿರುವ ಪುಟ್ಟ ಮಗು ಟೀಮ್​ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಪುತ್ರ ಅಕಾಯ್​ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೊಹ್ಲಿ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ ಸ್ಪಷ್ಟನೆ ನೀಡಿದ್ದಾರೆ.

ಐದು ಟೆಸ್ಟ್​ ಪಂದ್ಯಗಳನ್ನು ಒಳಗೊಂಡ ಬಾರ್ಡರ್​-ಗವಾಸ್ಕರ್​ ಟ್ರೋಫಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯ ಪರ್ತ್ ಕ್ರೀಡಾಂಗಣದಲ್ಲಿ ನಡೆಯಿತು. ಇದೇ ಟೆಸ್ಟ್‌ ಪಂದ್ಯದ ಮೂರನೇ ದಿನ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಇದಕ್ಕೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಸಾಕ್ಷಿಯಾದರು.

ಅನುಷ್ಕಾ ಅವರು ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು. ಈ ವೇಳೆ ತಮ್ಮ ಪತಿ ಕೊಹ್ಲಿ ಶತಕ ಬಾರಿಸಿ ಸಂಭ್ರಮಿಸಿದಾಗ ಅನುಷ್ಕಾ ಫ್ಲೈಯಿಂಗ್ ಕಿಸ್ ನೀಡಿದರು. ಈ ದೃಶ್ಯವನ್ನು ಕ್ಯಾಮೆರಾಮನ್‌ಗಳು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದರು. ಇದೇ ಸಂದರ್ಭದಲ್ಲಿ ಅನುಷ್ಕಾ ಹಿಂದೆ ಒಬ್ಬ ವ್ಯಕ್ತಿಯ ಕೈಯಲ್ಲಿ ಮಗು ಕಾಣಿಸಿತು. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್​ ಆಗುತ್ತಿದ್ದಂತೆ ಆತ ಕೊಹ್ಲಿಯ ಮಗ ಅಕಾಯ್​. ನೋಡಲು ಅಪ್ಪನ ಜೆರಾಕ್ಸ್ ಕಾಫಿಯಂತಿದ್ದಾನೆ ಎಂದು ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈದರು.

ಇದನ್ನು ಗಮನಿಸಿದ ವಿರಾಟ್ ಕೊಹ್ಲಿ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ, ತಮ್ಮ ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದು ಸಂಪೂರ್ಣವಾಗಿ ತಪ್ಪು. ಆ ಮಗು ನಮ್ಮ ಅಕಾಯ್​ ಅಲ್ಲ. ಅದು ಕೊಹ್ಲಿ ಮತ್ತು ಅನುಷ್ಕಾ ಸ್ನೇಹಿತನ ಮಗಳು ಎಂದು ಭಾವನಾ ತಿಳಿಸಿದ್ದಾರೆ. ಈ ಮೂಲಕ ವೈರಲ್​ ಆಗುತ್ತಿರುವ ಫೋಟೋಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Virat Kohli 1

ಅಂದಹಾಗೆ ಕೊಹ್ಲಿ ಹಾಗೂ ಅನುಷ್ಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರನ್ನು ಮಾಧ್ಯಮಗಳಿಂದ ದೂರವಿಟ್ಟು ಬೆಳೆಸಲಾಗುತ್ತಿದೆ. ಕ್ಯಾಮೆರಾ ಕಣ್ಣಿಗೆ ಬೀಳದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಈಗಾಗಲೇ ದಂಪತಿ ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋ ತೆಗೆಯದಂತೆ ಮಾಧ್ಯಮ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ವಿರುಷ್ಕಾ ದಂಪತಿ ಮಗಳಿಗೆ ವಮಿಕಾ ಮತ್ತು ಪುತ್ರನಿಗೆ ಅಕಾಯ್​ ಎಂದು ಹೆಸರಿಟ್ಟಿದ್ದಾರೆ.

ಇನ್ನು ಪರ್ತ್​ ಟೆಸ್ಟ್​ ವಿಚಾರಕ್ಕೆ ಬರುವುದಾದರೆ, ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಬಗ್ಗುಬಡಿಯುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25ರಲ್ಲಿ ಟೀಮ್​ ಇಂಡಿಯಾ ಉತ್ತಮ ಆರಂಭವನ್ನು ಕಂಡಿದೆ. 295 ರನ್‌ಗಳ ಭಾರಿ ಅಂತರದಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ರಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net