

ದುಬೈ: 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡ ಭಾರತ ತಂಡ ಸೂಪರ್ ಸಂಡೇ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಬಡಿದಟ್ಟುವ ಮೂಲಕ ಹಾಲಿ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನತ್ತ ದಾಪುಗಾಲಿಟ್ಟಿತು. ಮಾತ್ರವಲ್ಲ, ಪಾಕ್ ತಂಡವನ್ನು ನಿರ್ಗಮನದ ಬಾಗಿಲಿನತ್ತ ದೂಡಿತು. 8 ವರ್ಷದ ಕೆಳಗೆ ತಂಡದ ನಾಯಕರಾಗಿ ಫೈನಲ್‌ನಲ್ಲಿ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ (Virat Kohli) ಭಾನುವಾರ 51ನೇ ಏಕದಿನ ಶತಕ ಬಾರಿಸುವ ಮೂಲಕ ಭಾರತದ ಗೆಲುವಿನ ರೂವಾರಿಯಾದರು.
ಪಾಕಿಸ್ತಾನ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ (100*ರನ್, 111 ಎಸೆತ, 7 ಬೌಂಡರಿ) ತಮ್ಮ ಪಾರುಪತ್ಯವನ್ನು ಮುಂದುವರೆಸಿದ್ದಾರೆ. ಪಾಕಿಸ್ತಾನದ ವಿರುದ್ಧ ಶತಕ ಸಿಡಿಸುವ ಮೂಲಕ ಅನೇಕ ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಅದರಲ್ಲಿ ಏಕದಿನದಲ್ಲಿ ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ 14 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ವಿರಾಟ್ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ಐಸಿಸಿ ವಿಶ್ವಕಪ್, ಏಷ್ಯಾಕಪ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ (Virat Kohli) ಪಾತ್ರರಾಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಅಧಿಪತ್ಯವನ್ನು ಮುಂದುವರೆಸಿದ್ದಾರೆ.
ಇದಲ್ಲದೆ ವಿರಾಟ್ ಕೊಹ್ಲಿ (287 ಇನಿಂಗ್ಸ್) ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಪೂರೈಸಿದ ವಿಶ್ವದ ಮೂರನೇ ಹಾಗೂ ವೇಗವಾಗಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್. ಸಚಿನ್ ತೆಂಡುಲ್ಕರ್ (350 ಇನಿಂಗ್ಸ್), ಕುಮಾರ್ ಸಂಗಕ್ಕರ (378) ಮೊದಲಿಬ್ಬರು ಸಾಧಕರು. ವಿರಾಟ್ ಕೊಹ್ಲಿ (157) ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ (ವಿಕೆಟ್ ಕೀಪರ್ ಹೊರತುಪಡಿಸಿ) ವಿಶ್ವದ ಮೂರನೇ ಹಾಗೂ ಭಾರತೀಯ ಆಟಗಾರ ಎನಿಸಿದರು. ಮಹೇಲಾ ಜಯವರ್ಧನೆ (218), ರಿಕಿ ಪಾಂಟಿಂಗ್ (160) ಮೊದಲೆರಡು ಸ್ಥಾನದಲ್ಲಿದ್ದಾರೆ.