

ನವದೆಹಲಿ: ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಭರದ ಸಿದ್ಧತೆ ನಡೆದಿದ್ದು, ಟೂರ್ನಿ ಆರಂಭವಾಗುವುದನ್ನು ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇನ್ನೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನದ ಆತಿಥ್ಯ ವಹಿಸುತ್ತಿದ್ದು, ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ (ಹೈಬ್ರಿಡ್ ಮಾದರಿ) ಆಡಲಿದೆ. ಟೂರ್ನಿ ಶುರುವಾಗುವುದಕ್ಕೂ ಮುನ್ನ ಭಾರತದ ಮಾಜಿ ಆಟಗಾರರು ಟೀಮ್ ಇಂಡಿಯಾಗೆ ಸಲಹೆಗಳನ್ನು ನೀಡುತ್ತಿದ್ದು, ಇದೀಗ ಸುರೇಶ್ ರೈನಾ ಈ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಪ್ರದರ್ಶನಕ್ಕೆ ಬರುವುದಾದರೆ ಹಿರಿಯ ಆಟಗಾರರಾದ ರೋಹಿತ್ (Rohit Sharma) ಹಾಗೂ ವಿರಾಟ್ (Virat Kohli) ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿತ್ತು. ಆದರೆ, ನಿರೀಕ್ಷೆ ಮೂಡಿಸಿದ್ದ ಈ ಇಬ್ಬರು ಆಟಗಾರರು ಭಾರೀ ನಿರಾಸೆ ಮೂಡಿಸಿದ್ದು, ಸರಣಿ ಮುಗಿದ ಬೆನ್ನಲ್ಲೇ ಇವರುಗಳ ನಿವೃತ್ತಿಗೆ ಆಗ್ರಹ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮಾತನಾಡಿದ್ದು, ವಿರಾಟ್ ಹಾಗೂ ರೋಹಿತ್ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸುರೇಶ್ ರೈನಾ, ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಯಶಸ್ಸಿನ ನಿಟ್ಟಿನಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಅನುಭವಿ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರು ಲಯಕ್ಕೆ ಮರಳುವುದು ಅತ್ಯಂತ ನಿರ್ಣಾಯಕವೆನಿಸಲಿದೆ. ಐಸಿಸಿ ಟೂರ್ನಿಗಳಲ್ಲಿ ರೋಹಿತ್ ಹಾಗೂ ಕೊಹ್ಲಿ ಹಿಂದಿನ ಪ್ರದರ್ಶನವನ್ನು ಗಮನಿಸಿದಾಗ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬುತ್ತದೆ.
ಒಬ್ಬರನ್ನೊಬ್ಬರು ನೆಚ್ಚಿಕೊಂಡು ಆಡುತ್ತಾರೆ. ದೊಡ್ಡ ಮೊತ್ತ ಪೇರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಒಂದು ವೇಳೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾದರೆ ಭಾರತದ ಚಾಂಪಿಯನ್ಸ್ ಟ್ರೋಫಿ ಅಭಿಯಾನವು ಉತ್ತಮವಾಗಿರಲಿದೆ. ರೋಹಿತ್ ಆಕ್ರಮಣಕಾರಿಯಾಗಿ ಆಡುವುದನ್ನು ಮುಂದುವರಿಸಬೇಕು. ಹಾಗಾದರೆ ಅದರ ಪ್ರಭಾವ ನಾಯಕತ್ವದ ಮೇಲೂ ಉಂಟಾಗುತ್ತದೆ. ಇನ್ನೊಂದೆಡೆ ಏಕದಿನ ಆಟದ ವಿಚಾರಕ್ಕೆ ಬಂದಾಗ ಕೊಹ್ಲಿ ಸ್ವಯಂಚಾಲಿತರಾಗಿ ವಿಭಿನ್ನ ಹಂತದಲ್ಲಿರುತ್ತಾರೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.