

Men dancing in sarees : ಮನುಷ್ಯನ ಕಲ್ಪನೆಯನ್ನೂ ಮೀರಿ ಜಗತ್ತು ಬೆಳೆಯುತ್ತಿದೆ. ಇಂದು ಟೆಕ್ನಾಲಜಿಗಳೇ ಎಲ್ಲಡೆ ಆವರಿಸಿದೆ. ಆದರೆ, ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅಂಥದ್ದೇ ಆಚರಣೆಯನ್ನು ನಮ್ಮ ಭಾರತದ ಒಂದು ಹಳ್ಳಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತ ವೈವಿಧ್ಯತೆಯನ್ನು ಹೊಂದಿರುವ ರಾಷ್ಟ್ರ. ಇಲ್ಲಿ ಆಯಾ ಪ್ರದೇಶಗಳಲ್ಲಿ ಮತ್ತು ಅಲ್ಲಿ ವಾಸಿಸುವ ಜನರ ನಂಬಿಕೆಗಳನ್ನು ಅವಲಂಬಿಸಿ ಪದ್ಧತಿಗಳು ಮತ್ತು ಸಂಪ್ರದಾಯಗಳು ಬದಲಾಗುತ್ತವೆ. ಎಲ್ಲಾ ಸ್ಥಳಗಳು ಒಂದೇ ರೀತಿಯ ಪದ್ಧತಿಗಳು ಮತ್ತು ಆಚರಣೆಗಳನ್ನು ಹೊಂದಿರುವುದಿಲ್ಲ. ಹೀಗಾಗಿ, ಗುಜರಾತಿನ ಅಹಮದಾಬಾದ್‌ನ ಒಂದು ಹಳ್ಳಿಯಲ್ಲಿ ಪುರುಷರು ಸೀರೆ ಉಟ್ಟು ಗಾರ್ಭ ನೃತ್ಯ ಮಾಡುವ ವಿಶಿಷ್ಟ ಪದ್ಧತಿ ಮುಂದುವರೆದಿದೆ. ಅಲ್ಲಿನ ಜನರು ಕಳೆದ 200 ವರ್ಷಗಳಿಂದ ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪದ್ಧತಿ ಏನು? ಇದರ ಹಿಂದಿನ ಅಸಲಿ ಕಥೆ ಏನೆಂದು ನಾವೀಗ ತಿಳಿದುಕೊಳ್ಳೋಣ.
ಈ ಪದ್ಧತಿಯನ್ನು ಗುಜರಾತ್‌ನ ಅಹಮದಾಬಾದ್ ನಗರದ ಸದುಮತ ನೀ ಪೋಲ್ ಎಂಬ ಗ್ರಾಮದಲ್ಲಿ ಆಚರಿಸಲಾಗುತ್ತದೆ. ಪ್ರತಿ ವರ್ಷ ದಸರಾ ನವರಾತ್ರಿಯ ಅಷ್ಟಮಿ (ಎಂಟನೇ ದಿನ) ದಂದು, ಬರೋತ್ ಸಮುದಾಯದ ಪುರುಷರು ಸೀರೆಗಳನ್ನು ಉಟ್ಟು ಗಾರ್ಭ ನೃತ್ಯಗಳನ್ನು ಮಾಡುವುದು ಇಲ್ಲಿನ ಸಂಪ್ರದಾಯ/ಪದ್ಧತಿಯಾಗಿದೆ. ಆದಾಗ್ಯೂ, 200 ವರ್ಷಗಳಷ್ಟು ಹಳೆಯದಾದ ಶಾಪದಿಂದಾಗಿ, ಅಲ್ಲಿನ ಜನರು ಈ ಪದ್ಧತಿಯನ್ನು ಅನುಸರಿಸುತ್ತಾರೆ.
200 ವರ್ಷಗಳ ಹಿಂದೆ, ಆ ಗ್ರಾಮದಲ್ಲಿ ಸಾದುಬೆನ್ ಎಂಬ ಮಹಿಳೆ ಇದ್ದಳು. ಆದರೆ, ಮೊಘಲ್ ಸಾಮ್ರಾಜ್ಯದ ಅಧಿಕಾರಿಯೊಬ್ಬರು ಅವಳನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಇದರಿಂದ ಭಯಭೀತರಾದ ಸಾದುಬೆನ್, ತನ್ನ ಬರೋಟ್ ಸಮುದಾಯದ ಪುರುಷರನ್ನು ಸಹಾಯಕ್ಕಾಗಿ ಬೇಡಿಕೊಂಡರು. ಆದರೆ, ಸಹಾಯ ಮಾಡಲು ಯಾರೊಬ್ಬರು ಮುಂದೆ ಬರಲಿಲ್ಲ. ಇದರಿಂದ ಆಕೆ ಒಂಟಿಯಾದಳು. ಇದರಿಂದಾಗಿ, ಸಾದುಬೆನ್ ತನ್ನ ಮಗುವನ್ನು ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ, ಅವಳು ತೀವ್ರ ದುಃಖ ಮತ್ತು ಕೋಪದಿಂದ ತನ್ನ ಬುಡಕಟ್ಟಿನ ಎಲ್ಲಾ ಪುರುಷರನ್ನು ಶಪಿಸಿದಳು. ಅವರ ಭವಿಷ್ಯದ ಪೀಳಿಗೆಗಳು ಸಹ ಹೇಡಿಗಳಾಗುತ್ತವೆ ಎಂದು ಶಾಪವಿತ್ತಳು. ಅದರ ನಂತರ, ಸಾದುಬೆನ್, ಸತಿಪದ್ಧತಿಯ ಪ್ರಕಾರ ತನ್ನ ಜೀವನವನ್ನು ಕೊನೆಗೊಳಿಸಿದಳು.
ಬರೋಟ್ ಸಮುದಾಯದ ಪುರುಷರು ಈಗ ತಮ್ಮ ಪೂರ್ವಜರು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಈ ಆಚರಣೆಯನ್ನು ಅನುಸರಿಸುತ್ತಿದ್ದಾರೆ. ತಮ್ಮನ್ನು ಶಪಿಸಿದ ಸಾದುಬೆನ್ ಮಾತೆಯನ್ನು ಅವರು ಈಗ ದೇವತೆ ಎಂದು ಪರಿಗಣಿಸುತ್ತಾರೆ. ಪ್ರತಿ ವರ್ಷ ನವರಾತ್ರಿಯ ಎಂಟನೇ ದಿನ (ಅಷ್ಟಮಿ) ದಂದು, ಬರೋಟ್ ಸಮುದಾಯದ ಪುರುಷರು ಸೀರೆಗಳನ್ನು ಧರಿಸಿ ಸಾದುಮತಾ ದೇವಾಲಯದ ಮುಂದೆ ಗಾರ್ಭ ನೃತ್ಯ ಮಾಡುತ್ತಾರೆ.
ಅಂದಹಾಗೆ, ಈ ಆಚರಣೆಯ ಮುಖ್ಯ ಉದ್ದೇಶ ಪುರುಷರಲ್ಲಿ ಮಹಿಳೆಯರ ಬಗ್ಗೆ ಗೌರವ ಮತ್ತು ನಮ್ರತೆಯನ್ನು ಮೂಡಿಸುವುದು! ಈ ಆಚರಣೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿವೆ. ಇದನ್ನು ನೋಡಿದ ನೆಟ್ಟಿಗರು, ಪುರುಷರು ತಮ್ಮ ಸಂಸ್ಕೃತಿ ಮತ್ತು ಪದ್ಧತಿಗಳಿಗೆ ನೀಡುತ್ತಿರುವ ಗೌರವವನ್ನು ಶ್ಲಾಘಿಸುತ್ತಿದ್ದಾರೆ. 200 ವರ್ಷಗಳಷ್ಟು ಹಳೆಯದಾದ ಸಂಪ್ರದಾಯವನ್ನು ಅನುಸರಿಸುವುದು ಅದ್ಭುತವಾಗಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)