

ಬೆಂಗಳೂರು: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಹಮ್ಮಿಕೊಂಡಿದ್ದ ವಿಪ್ರೋತ್ಸವ-2024 ಕಾರ್ಯಕ್ರಮ ಹಾಗೂ ಸಾಧಕರಿಗೆ ಭಾರ್ಗವ ಭೂಷಣ ಪ್ರಶಸ್ತಿ ಸಮಾರಂಭವು ಭಾನುವಾರ ಚಾಮರಾಜಪೇಟೆಯ ಗಾಯನ ಸಮಾಜದಲ್ಲಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶಪಾಂಡೆ,
ಬ್ರಾಹ್ಮಣರಲ್ಲಿ ಸಂಘಟನೆ ಕೊರತೆ ಇದೆ. ಬ್ರಾಹ್ಮಣ ಯುವಕರು ಸಮುದಾಯದಿಂದ ದೂರ ಉಳಿದಿದ್ದಾರೆ, ತಂದೆ, ತಾಯಿಂದರಿರು ಆ ಮಕ್ಕಳನ್ನು ಕರೆತರಬೇಕು ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಾಹ್ಮಣರ ಕೊಡುಗೆ ಇದೆ, ಬ್ರಾಹ್ಮಣರಲ್ಲಿ ಬುದ್ದಿವಂತ ಜನರಿದ್ದಾರೆ. ಬ್ರಾಹ್ಮಣರು ಹೃದಯವೈಶಾಲ್ಯ ಉಳ್ಳವರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಮಕ್ಕಳು ತಂದೆ, ತಾಯಿಯನ್ನ ಗೌರವದಿಂದ ನೋಡುತ್ತಿಲ್ಲ ಇದು ಬದಲಾಗಬೇಕು ಎಂಬ ಕಳಕಳಿ ವ್ಯಕ್ತಪಡಿಸಿದರು.
ಶಾಸಕರಾದ ಸಿ.ಕೆ.ರಾಮಮೂರ್ತಿ ಮಾತನಾಡಿ ಬ್ರಾಹ್ಮಣ ಸಮುದಾಯದ ಯುವಕರು ಸಂಘಟಿತರಾಗಬೇಕು. ಬ್ರಾಹ್ಮಣರ ವಿರುದ್ದ ಟೀಕೆ ಮಾಡುವವರ ವಿರುದ್ದ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.
ಸಮಾರಂಭದಲ್ಲಿ ಚಿತ್ರನಟ ಶ್ರೀಧರ್, ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ, ಪತ್ರಕರ್ತ ರವಿಹೆಗಡೆ, ವೈದ್ಯರುಗಳಾದ ಡಾ.ಬಿ.ಎಸ್.ಶ್ರೀನಾಥ್, ಡಾ.ಸುಧೀರ್ ಹೆಗಡೆ, ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಪಂಡಿತ್ ಸತ್ಯಧ್ಯಾನ ಆಚಾರ್ಯ ಕಟ್ಟಿ ಮತ್ತು ಕಾಂತಿ ಸ್ವೀಟ್ಸ್ ಮಾಲೀಕ ಶೈಲೇಂದ್ರ ಶರ್ಮರವರಿಗೆ ಭಾರ್ಗವ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಅಧ್ಯಕ್ಷ ಡಾ.ಗೋವಿಂದ ಕುಲಕರ್ಣಿ, ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಆಸೆಗೋಡು ಜಯಸಿಂಹ, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಕಾರ್ಯದರ್ಶಿ ಗಿರೀಶ್ ನಿಲಗುಂದ, ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಡಾ.ಸುಬ್ರಮಣ್ಯ ಶರ್ಮ, ಟಿ.ರಮಣಚಾರಿ, ರಾಜ್ಯಾಧ್ಯಕ್ಷ ಜೆ.ಆರ್.ಪ್ರದೀಪ್ ಮತ್ತಿತರರಿದ್ದರು.