

ಕಲಬುರಗಿ: ಸಮಾಜ ಸೇವೆಯೇ ಭಗವಂತನ ನಿಜವಾದ ಪೂಜೆ ಎಂದು ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ ಹೇಳಿದರು.
ಉದನೂರು ರಸ್ತೆಯ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಜಯತೀರ್ಥ ವೆಲ್ಫೇರ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಸೋಮವಾರ ಆಯೋಜಿಸಿದ್ದ ಸಾಧಕರಿಗೆ ವಿಪ್ರಚೈತನ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸೇವೆಯಲ್ಲೇ ದೇವರನ್ನು ಕಾಣಬೇಕು. ಬಡವರಿಗೆ ಸಹಾಯ ಮಾಡುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಬೇಕು. ಉಳ್ಳವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ಸಲಹೆ ನೀಡಿದರು.
ವಿದ್ಯಾವಂತರ ಸಂಖ್ಯೆ ಬೆಳೆದಂತೆ ಬಡತನ ನಿರ್ಮೂಲನೆ ಆಗಲಿದೆ. ಸಾಧಕರನ್ನು ಗುರುತಿಸಿ ತಂದೆ-ತಾಯಿ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವ ಬಾಲಕೃಷ್ಣ ಲಾತೂರಕರ್ ಹಾಗೂ ರವಿ ಲಾತೂರಕರ್ ಕಾರ್ಯ ಶ್ಲಾಘನೀಯ ಎಂದರು.
ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಲಾತೂರಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ ನಗರ ಹನುಮಾನ ಮಂದಿರ ಅರ್ಚಕ ಗುಂಡಾಚಾರ್ಯ ನರಿಬೋಳ, ಗೋಪ್ರೇಮಿ ಕಿಶೋರ ದೇಶಪಾಂಡೆ, ಪಂ.ಪ್ರಸನ್ನಾಚಾರ್ಯ ಜೋಶಿ, ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಭುರ್ಲಿ ಪ್ರಹ್ಲಾದ್, ವ್ಯಾಸರಾಜ ಸಂತೆಕೆಲ್ಲೂರ, ಲಕ್ಷ್ಮೀನಾರಾಯಣ ಭಜನಾ ಮಂಡಳಿ ಅಧ್ಯಕ್ಷೆ ಜ್ಯೋತಿ ಲಾತೂರಕರ್, ಉಷಾ ಲಾತೂರಕರ್, ಛಾಯಾ ಮುಳುರ, ಜಾನಕಿ ದೇಶಪಾಂಡೆ, ಶಾಂತಿ ದೇಸಾಯಿ, ಅನೀಲ ಕುಲಕರ್ಣಿ, ಸುರೇಶ ಕುಲಕರ್ಣಿ, ವಿನೂತ ಜೋಶಿ ಇತರರಿದ್ದರು.
ಸಾಕ್ಷಿ ಮತ್ತು ಮಾಧುರಿ ಪ್ರಾರ್ಥಿಸಿದರು. ಟ್ರಸ್ಟ್ ಕಾರ್ಯದರ್ಶಿ ರವಿ ಲಾತೂರಕರ್ ನಿರೂಪಣೆ ಮಾಡಿದರು. ಪತ್ರಕರ್ತ ಶಾಮಸುಂದರ ಕುಲಕರ್ಣಿ ವಂದಿಸಿದರು. ಹಿರಿಯ ವಿದ್ವಾಂಸ ವಸಂತ ಮಾಧವಾಚಾರ್ಯರಿಗೆ ಭೀಮಸೇನರಾವ ಲಾತೂರಕರ್ ಸ್ಮರಣಾರ್ಥ ಹಾಗೂ ಸಮಾಜ ಸೇವಕಿ ಸುಧಾ ಕರಲಗಿಕರ್ ಅವರಿಗೆ ಶಾಂತಾಬಾಯಿ ಲಾತೂರಕರ್ ಸ್ಮರಣಾರ್ಥ ವಿಪ್ರಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.