

ಬೆಂಗಳೂರು: ಬಿಟಿಎಂ ಲೇಔಟ್‌ನಲ್ಲಿ ಯುವತಿ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ(G Parameswar) ನೀಡಿರುವ ಹೇಳಿಕೆ ಸಾರ್ವಜನಿಕ ವಲಯ(Violence against a young woman; Public outrage over Home Minister's statement)ದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ದೊಡ್ಡ ನಗರ ಇಂತಹ ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ನಡೆಯುತ್ತವೆ ಎಂದು ನೀಡಿರುವ ಹೇಳಿಕೆಗೆ ಪ್ರತಿಪಕ್ಷಗಳು ಕೆಂಡಕಾರಿವೆ. ಸಮಾಜದ ಶಾಂತಿ ನೆಮ್ಮದಿ ಕಾಪಾಡುವ ಹೊಣೆಹೊತ್ತಿರುವ ಗೃಹ ಸಚಿವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬಿಟಿಎಂ ಲೇಔಟ್‌ನಲ್ಲಿ ಯುವತಿ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ, ಇಷ್ಟು ದೊಡ್ಡ ಸಿಟಿಯಲ್ಲಿ ಅಲ್ಲಿ ಇಲ್ಲಿ ಇಂತಹ ಒಂದು ಘಟನೆಗಳು ಆಗುತ್ತದೆ. ನಿತ್ಯವೂ ಪೊಲೀಸ್ ಕಮೀಷನರ್‌ಗೆ ಎಚ್ಚರಿಕೆಯಿಂದ ಇರಬೇಕು. ಬೀಟ್ ವ್ಯವಸ್ಥೆ ಚೆನ್ನಾಗಿ ಆಗಬೇಕು ಎಂದು ಹೇಳುತ್ತೇನೆ. ಪ್ರತಿ ಏರಿಯಾ ಮಾನಿಟರ್ ಮಾಡಬೇಕು. ಪೆಟ್ರೋಲಿಂಗ್ ಏನು ಆಗುತ್ತಿದೆ ಅದನ್ನು ಶಿಸ್ತಿನಿಂದ, ಪರಿಣಾಮಕಾರಿಯಾಗಿ ಮಾಡಬೇಕು ಎಂದು ದಿನನಿತ್ಯ ಸೂಚನೆ ಕೊಡುತ್ತೇನೆ ಎಂದು ಹೇಳಿದರು.
ಅಲ್ಲೊಂದು ಇಲ್ಲೊಂದು ಘಟನೆ ಆದಾಗ ಸ್ವಾಭಾವಿಕವಾಗಿ ಜನರ ಗಮನ ಸೆಳೆಯುತ್ತವೆ. ಅಷ್ಟಕ್ಕೇ ನಾವು ಬಿಡುವುದಿಲ್ಲ. ನಿರಂತರವಾಗಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. 24/7 ಮಳೆ, ಚಳಿ ಅನ್ನದೇ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ಶಾಂತವಾಗಿದೆ. ಇಷ್ಟು ದೊಡ್ಡ ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ಆಗುತ್ತೆ. ಅದಕ್ಕೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಬೀಟ್‌ವ್ಯವಸ್ಥೆ ಮತ್ತಷ್ಟು ಬಲಪಡಿಸಿ ಎಂದು ಇವತ್ತು ಕೂಡ ಕಮೀಷನರ್‌ಗೆ ಸೂಚನೆ ನೀಡಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದರು.
ಬಿಟಿಎಂ ಲೇಔಟ್ ನಲ್ಲಿನ ಯುವತಿಯ ಮೇಲಿನ ದೌರ್ಜನ್ಯ ಘಟನೆಯ ಕುರಿತಂತೆ ಗೃಹ ಸಚಿವ ಡಾ.ಪರಮೇಶ್ವರ ಅವರ ಬೇಜವಾಬ್ದಾರಿ ಹೇಳಿಕೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವುದನ್ನು ಸ್ವತಃ ಒಪ್ಪಿಕೊಂಡಂತಾಗಿದೆ. ನಡು ರಸ್ತೆಯಲ್ಲಿ ಹೆಣ್ಣು ಮಗಳೊಬ್ಬಳಿಗೆ ಕಿರಾತಕರು ನೀಡುವ ಕಿರುಕುಳವನ್ನು ಮಾಮೂಲಿ ಘಟನೆ ಎಂಬ ರೀತಿಯಲ್ಲಿ ಹೇಳಿರುವ ಗೃಹ ಸಚಿವರ ಮಾತುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಘನತೆಯನ್ನು ಕುಗ್ಗಿಸುವ ನಡೆಯಾಗಿದೆ. ಗೃಹ ಸಚಿವರ ಮಾತುಗಳು ಅವರ ಅಸಮರ್ಥತೆಯನ್ನು ಪ್ರತಿಬಿಂಬಿಸಿವೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.