‘ಕಸ್ಟಡಿ’ಯಲ್ಲಿ ವಿನ್ಯಾಶೆಟ್ಟಿ: ಎರಡು ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕರಾವಳಿ ಹುಡುಗಿ

vinya shetty
Published on

ಬೆಂಗಳೂರು: ಗಣೇಶ್ ಅಭಿನಯದ ‘ಚಮಕ್’ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ಕರಾವಳಿ ಮೂಲದ ವಿನ್ಯಾ ಶೆಟ್ಟಿ ಬಳಿಕ ಮಂಸೋರೆ ನಿರ್ದೇಶನದ ‘ಆ್ಯಕ್ಟ್ 1978’ನಲ್ಲಿ ನಟಿಸಿದ್ದರು. ಇದೀಗ ಅವರು ಸಣ್ಣ ಪಾತ್ರಗಳಿಂದ ಲೀಡ್ ರೋಲ್‌ಗೆ ಭಡ್ತಿ ಪಡೆದಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ ರಾಘವ ಸೂರ್ಯ ಅಭಿನಯದ ‘ರಮ್ಮಿಆಟ’ದಲ್ಲಿ ನಾಯಕಿಯಾಗಿದ್ದಾರೆ. ಇದೀಗ ಜೆ.ಜಿ.ಶ್ರೀನಿವಾಸ್ ನಿರ್ದೇಶನದ ‘ಕಸ್ಟಡಿ’ ಚಿತ್ರದಲ್ಲೂ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಈ ಹಿಂದಿನ ಚಿತ್ರಗಳಲ್ಲಿನ ನನ್ನ ನಟನೆ ಗಮನಿಸಿಯೇ ಈ ಸಿನಿಮಾದಲ್ಲಿ ಅವಕಾಶ ದೊರೆಯಿತು. ‘ಕಸ್ಟಡಿ’ಯಲ್ಲಿ ನಾನು ಎರಡನೇ ನಾಯಕಿ. ಪಾಸಿಟಿವ್ ಹಾಗೂ ನೆಗೆಟಿವ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರಿಯಾ ಶಠಮರ್ಷಣ ಹಾಗೂ ಜೆ.ಜಿ.ಶ್ರೀನಿವಾಸ್ ಜತೆ ನನ್ನ ಪಾತ್ರ ಸಾಗುತ್ತದೆ. ಸೈಬರ್ ಕ್ರೈಂ ವಿರುದ್ಧ ಹೋರಾಟದ ಕಥೆ ಇದಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ಕನ್ನಡ, ತಮಿಳಿನಲ್ಲಿ ಬಿಜಿ: ಕನ್ನಡದ ಜತೆಗೆ ವಿನ್ಯಾ ಶೆಟ್ಟಿ ತಮಿಳಿನಲ್ಲೂ ಬಿಜಿಯಾಗಿದ್ದಾರೆ. ಈ ಬಗ್ಗೆ ‘ಕನ್ನಡದ ನಾಲ್ಕನೇ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು ಮುಂದಿನ ತಿಂಗಳು ಮುಹೂರ್ತ ಕಾಣಲಿದೆ. ಜತೆಗೆ ತಮಿಳಿನ ’ಆತ್ಮಬಂಧನ’ದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅವರಲ್ಲಿ ನಾನು ಕೂಡ ಒಬ್ಬಳು. ಅದರ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಎರಡನೇ ಹಂತದ ಶೂಟಿಂಗ್ ಸದ್ಯದಲ್ಲಿಯೇ ಆರಂಭವಾಗಲಿದೆ’ ಎಂದು ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net