

Vincy Aloshious: ಹಲವಾರು ಮಲಯಾಳಂ ಚಿತ್ರಗಳಲ್ಲಿ ತನ್ನ ನಟನಾ ಛಾಪು ಮೂಡಿಸಿ, ಸಿನಿಪ್ರೇಕ್ಷಕರಿಂದ ಸೈ ಎನಿಸಿಕೊಂಡಿರುವ ವಿನ್ಸಿ ಸೋನಿ, “ಇತ್ತೀಚೆಗಷ್ಟೇ ನಡೆದ ಒಂದು ಚಿತ್ರದ ಚಿತ್ರೀಕರಣದ ಸಮಯ. ಆತ ಓರ್ವ ಸ್ಟಾರ್ ನಟ. ಅವರ ಸಿನಿಮಾದಲ್ಲಿ ನಾನು ಸಹ ಕೆಲಸ ಮಾಡಿದ್ದೆ. ಶೂಟಿಂಗ್ ನಡೆಯುವಾಗ ನನ್ನ ಡ್ರೆಸ್ ಸ್ವಲ್ಪ ವಿಚಿತ್ರವಾಗಿತ್ತು. ಕೂಡಲೇ ಅದನ್ನು ಸರಿಪಡಿಸಿಕೊಳ್ಳಲು ನಾನು ಕ್ಯಾರವಾನ್ ಕಡೆಗೆ ಹೋಗುತ್ತಿದ್ದೆ. ಆಗ ನಾನು ಕೂಡ ಒಳಗೆ ಬರ್ತಿನಿ, ಸರಿ ಮಾಡೋಣ ಎಂದು ಆತ ಹೇಳಿದ. ಈ ನಡೆ ನನಗೆ ಕಿಂಚಿತ್ತು ಇಷ್ಟವಾಗಲಿಲ್ಲ. ಚಿತ್ರೀಕರಣದ ವೇಳೆ ನಟನ ಬಾಯಿಯಿಂದ ಆಕಸ್ಮಿಕವಾಗಿ ಬಿಳಿ ವಸ್ತು ಹೊರಬೀಳುತ್ತಿತ್ತು. ಅಸಲಿಗೆ ಅದು ಡ್ರಗ್ಸ್ ಎಂಬುದು ಖಚಿತವಾಯಿತು” ಎಂದು ವಿಡಿಯೋದಲ್ಲಿ ಹೆಸರೇಳದೆ ಆರೋಪಿಸಿದ್ದರು.
ವಿಲನ್ ಆಗಿಯೂ ನಟಿಸಿರುವ ಮಲಯಾಳಂ ನಟ ಶೈನ್ ಟಾಮ್ ಚಾಕೊ ಈ ವಿವಾದಕ್ಕೆ ಗುರಿಯಾಗಿರುವ ಕಲಾವಿದ ಎಂದು ಸಿನಿ ಮೂಲಗಳು ತಿಳಿಸಿವೆ. ಮತ್ತೊಮ್ಮೆ ವಿವಾದ ಅಲೆಯಲ್ಲಿ ಸಿಲುಕಿರುವ ಶೈನ್, ನಟಿ ಹೊರಿಸಿದ ಆರೋಪದ ರೂವಾರಿ ಎಂದು ತಿಳಿದುಬಂದಿದೆ. ಈ ವಿಚಾರವನ್ನು ವಿಡಿಯೋಗೆ ಮಾತ್ರ ಸೀಮಿತಗೊಳಿಸದ ವಿನ್ಸಿ, ಖುದ್ದಾಗಿ ಮಲಯಾಳಂ ಚಲನಚಿತ್ರ ಕಲಾವಿದರ ಸಂಘಕ್ಕೆ ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಕೂಡ ಸಲ್ಲಿಸಿದ್ದರು.
ಈ ವಿವಾದಕ್ಕೆ ಸ್ಪಂದಿಸಿರುವ ಚಿತ್ರಮಂಡಳಿ, ಶಿಸ್ತು ಕ್ರಮ ಜರುಗಿಸಲು ನಿರ್ಧರಿಸಿದೆ. ಆದರೆ, ವಿನ್ಸಿ ಇದೀಗ ದಿಢೀರ್ ಯು-ಟರ್ನ್ ಹೊಡೆದಿದ್ದು, ಟಾಮ್ ಚಾಕೊ ವಿರುದ್ಧ ನಾನು ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಬಯಸುವುದಿಲ್ಲ. ಡ್ರಗ್ಸ್ ಸೇವನೆ ಮತ್ತು ಅನುಚಿತ ವರ್ತನೆ ಕುರಿತು ಆಂತರಿಕವಾಗಿ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ನಟಿಯ ಈ ನಡೆ ಸದ್ಯ ಚಿತ್ರರಂಗದ ಸದಸ್ಯರಲ್ಲಿ ಅಚ್ಚರಿ ಮೂಡಿಸಿದೆ.
'ಸೂತ್ರವಾಕ್ಯಂ' ಚಿತ್ರದ ಸೆಟ್‌ನಲ್ಲಿ ಟಾಮ್ ಡ್ರಗ್ಸ್ ಬಳಸಿದ್ದರು ಎಂದು ಆರೋಪಿಸಿರುವ ವಿನ್ಸಿ, ದೂರಿನ ಕುರಿತು ಆಂತರಿಕ ಸಮಿತಿಯ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ಇದೆಲ್ಲದರ ನಡುವೆ ಟಾಮ್ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯಲು ಸಿದ್ಧ. ಶೈನ್ ಟಾಮ್ ಚಾಕೊ ಹೆಸರನ್ನು ಕೇರಳ ಫಿಲ್ಮ್ ಚೇಂಬರ್ ಪ್ರಧಾನ ಕಾರ್ಯದರ್ಶಿಯಾದ ಸಾಜಿ ನಾಂತಿಯಟ್ಟು ಅವರು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಅವರ ಹೆಸರನ್ನು ಉಲ್ಲೇಖಿಸಿದ್ದಕ್ಕಾಗಿ ನಾನಿಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ವಿನ್ಸಿ ಹೇಳಿದ್ದಾರೆ,(ಏಜೆನ್ಸೀಸ್).