ಸ್ಮಶಾನ ದಾರಿಗಾಗಿ ಗ್ರಾಮಸ್ಥರ ಪ್ರತಿಭಟನೆ

19kakkeri1
Published on

ಕಕ್ಕೇರಿ: ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿರುವ ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ದಾರಿ ಸಮಸ್ಯೆ ಬಗೆಹರಿಸುವಂತೆ ಹಾಗೂ ಸ್ಮಶಾನ ದಾರಿ ಬಂದ್​ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಗ್ರಾಮಸ್ಥರು ಶನಿವಾರ ಖಾನಾಪುರ&ತಾಳಗುಪ್ಪ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

ಈ ಸಮಸ್ಯೆ ಕುರಿತು ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ. ಈ ಹಿಂದೆ ಶವ ಇಟ್ಟು ಪ್ರತಿಭಟಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಿಂಗನಮಠ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಹೋಗಲು ಮುಖ್ಯರಸ್ತೆಯಿಂದ ದಾರಿ ವ್ಯವಸ್ಥೆ ಇದೆ. ಇದನ್ನು ಕೆಲವು ದಿನಗಳಿಂದ ಪಕ್ಕದಲ್ಲಿರುವ ಆಸ್ತಿಯ ಮಾಲೀಕ ಜೆಸಿಬಿ ಮೂಲಕ ಬಂದ್​ ಮಾಡಿದ್ದರು.

ಆ ಸಂದರ್ಭದಲ್ಲಿ ಶವ ರಸ್ತೆಯಲ್ಲಿಟ್ಟು ಪ್ರತಿಭಟಿಸಲಾಗಿತ್ತು. ಇದರಿಂದ ಅಧಿಕಾರಿಗಳು ಸ್ಮಶಾನಕ್ಕೆ ಹೋಗುವ ಬಂದ್​ ಮಾಡಿದ್ದ ರಸ್ತೆ ತೆರವುಗೊಳಿಸಿದ್ದರು. ಶನಿವಾರ ಮತ್ತೆ ಏಕಾಏಕಿ ಆಸ್ತಿಯ ಮಾಲೀಕ ಸ್ಮಶಾನಕ್ಕೆ ಹೋಗುವ ದಾರಿಯಲ್ಲೇ ಮನೆ ಕಟ್ಟಲು ತಯಾರಿ ನಡೆಸಿದ್ದಾರೆ. ಇದನ್ನು ವಿರೋಧಿಸಿ ಗ್ರಾಮಸ್ಥರು ತಾಳಗುಪ್ಪ& ಬೆಳಗಾವಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

ಇದನ್ನರಿತ ಬೀಡಿ ಉಪತಹಸೀಲ್ದಾರ್​ ರೋಹಿತ ಬಡಚಿಕರ, ನಂದಗಡ ಪಿಐ ಎಸ್​.ಸಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಮಂಗಳವಾರ ಖಾನಾಪುರ ತಹಸೀಲ್ದಾರ್​ ಗ್ರಾಮಕ್ಕೆ ಕರೆದುಕೊಂಡು ಬಂದು ಸ್ಮಶಾನ ದಾರಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದಾಗ ಪ್ರತಿಭಟನೆ ಹಿಂಪಡೆದರು.

ಗ್ರಾಪಂ ಅಧ್ಯ ಕಾಶೀಮ ಹಟ್ಟಿಹೋಳಿ, ಪಿಡಿಒ ಕಾವೇರಿ ಹಿಮಕರ, ಗ್ರಾಮ ಲೆಕ್ಕಾಧಿಕಾರಿ ಪರಶುರಾಮ ಕೆಸರೊಳ, ಗ್ರಾಪಂ ಉಪಾಧ್ಯೆ ಸರೋಜಾ ನಾಯಕ, ಗ್ರಾಪಂ ಸದಸ್ಯರಾದ ಶೋಭಾ ಮಾಟೊಳ್ಳಿ, ರಾಜು ರಪಾಟಿ, ಹಿರಿಯರಾದ ಪಾಂಡುರಂಗ ಮೀಟಗಾರ, ಮಹಾಂತೇಶ ಸಂಗೊಳ್ಳಿ, ಮಾವಳಿ ಮಾಟೊಳ್ಳಿ, ಬಾಳು ಅಂಬಡಗಟ್ಟಿ, ರವಿ ಛಲವಾದಿ, ದೇಮಣ್ಣ ಶಿವಪುಜಿ, ಈರಪ್ಪ ವಾಲ್ಮೀಕಿ, ಬಾಬುಲಾಲ ಪಟೇಲ, ಮಾರುತಿ ಬುದಪ್ಪನವರ, ಶಿವಾನಂದ ಬಾಗೇವಾಡಿ, ಅಪ್ಪಯ್ಯ ಹಿರೇಮಠ, ಕಾಂತು ಸಂಗೊಳ್ಳಿ, ಪ್ರಕಾಶಗೌಡ ಪಾಟೀಲ, ಪರಶುರಾಮ ನಾಯಕ, ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net