ಕಾರವಾರ: ಸೇತುವೆ ಕಾಮಗಾರಿ ಅರೆಬರೆಯಾದ ಕಾರಣ ಗೋಟೆಗಾಳಿ ಗ್ರಾಮ ಪಂಚಾಯಿತಿಯ ಸಾಲ್ಮಕ್ಕಿ, ಬರ್ಗಿ, ಮಡಕರ್ಣಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಬರ್ಗಿ, ಮಡಕರ್ಣಿ ಡಾಂಬರು ರಸ್ತೆಯಿಂದ ಸಾಲ್ಮಕ್ಕಿ ಎಂಬ ಗ್ರಾಮಕ್ಕೆ ತೆರಳುವ ಮಾರ್ಗದ ನಡುವೆ ಹಳ್ಳ ಹರಿಯುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ವಿದ್ಯಾರ್ಥಿಗಳು, ಜನರು ಓಡಾಡಲಾಗದೇ ಕಷ್ಟಪಡುತ್ತಾರೆ. ಕಟ್ಟಿಗೆಯ ಸಂಕ ಹಾಕಿಕೊಂಡು ಅಪಾಯದಲ್ಲಿ ಹಳ್ಳ ದಾಟುತ್ತಾರೆ. ಆಂಬುಲೆನ್ಸ್ ಕೂಡ ಹೋಗದೇ ತೊಂದರೆ ಅನುಭವಿಸುತ್ತಾರೆ. ಎರಡು ವರ್ಷಗಳ ಹಿಂದೆ ಗರ್ಭಿಣಿಯೊಬ್ಬಳನ್ನು ಹೆಗಲ ಮೇಲೆ ಹೊತ್ತು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಪರಿಸ್ಥಿತಿ ಅರಿತು ಹಿಂದೆ ರೂಪಾಲಿ ನಾಯ್ಕ ಶಾಸಕಿಯಾಗಿದ್ದಾಗ ಇಲ್ಲಿಗೆ ಸೇತುವೆಯೊಂದಕ್ಕೆ ಶಿಫಾರಸು ಮಾಡಿದ್ದರು. ಲೋಕೋಪಯೋಗಿ ಇಲಾಖೆಯ 2021-22 ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಅಪೆಂಡಿಕ್ಸ್ ಇ ಅಡಿ ಗ್ರಾಮ ಬಂಧು ಸೇತು ನಿರ್ಮಾಣಕ್ಕೆ 2023 ರ ಜನವರಿಯಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು.
30 ಲಕ್ಷ ರೂ.ವೆಚ್ಚದ ಸೇತುವೆ ಕಾಮಗಾರಿಯನ್ನು ಬೈಲಹೊಂಗಲದ ನಾಗಪ್ಪ ಚೆನ್ನನವರ್ ಎಂಬ ಗುತ್ತಿಗೆದಾರ ಪಡೆದಿದ್ದರು. ಅವರು ನಾಲ್ಕು ಕಂಬ ಹಾಕಿ ಕಾಮಗಾರಿಯನ್ನು ಅರ್ಧಕ್ಕೇ ಬಿಟ್ಟಿದ್ದಾರೆ. ಬೋರ್ಡ್ನಲ್ಲಿ ಕಾಮಗಾರಿ ಮುಕ್ತಾಯದ ದಿನಾಂಕ ಪ್ರಕಟಿಸಿಲ್ಲ. ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ, ಲೋಕೋಪಯೋಗಿ ಇಲಾಖೆಗೆ, ಜಿಲ್ಲಾಧಿಕಾರಿಗೆ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಸೋತಿದ್ದಾರೆ.
ಈಗ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ. ಗ್ರಾಮದಲ್ಲಿ ಸುಮಾರು 250 ಮತಗಳಿದ್ದು, ಬೈರೆ ಗ್ರಾಮದ ಮತಗಟ್ಟೆಗೆ ತೆರಳುತ್ತಾರೆ. ಸೇತುವೆ ಪ್ರಾರಂಭಿಸದೇ ಇದ್ದರೆ ಒಂದೇ ಒಂದು ಮತ ಹಾಕುವುದಿಲ್ಲ ಎಂದು ಗ್ರಾಮಸ್ಥರಾದ ಪಂಕಜ ವೇಳೀಪ, ಪ್ರಕಾಶ ಗಾಂವಕರ್, ದೀಪಕ್ ಗಾಂವಕರ್, ಪ್ರೀತಿ ಗಾಂವಕರ್, ಗೌರಿ ಗಾಂವಕರ್, ಶೋಭಾ ಗಾಂವಕರ್, ಚಂದ್ರಕಾಂತ ವೇಳೀಪ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಕಾರವಾರದ ವ್ಯಕ್ತಿ ಗಡಿಪಾರು : https://www.vijayavani.net/border-cross-punishment
ಗ್ರಾಮಲ್ಲಿ ಮಳೆಗಾಲದಲ್ಲಿ ಜನ ತುಂಬಾ ಸಮಸ್ಯೆ ಅನುಭವಿಸುತ್ತಾರೆ. ಇದರಿಂದ ಹಿಂದಿನ ಶಾಸಕರಿಗೆ ಮನವಿ ಮಾಡಿದ್ದೆ. ಅದಕ್ಕೆ ಸ್ಪಂದಿಸಿ ಅವರು ಸೇತುವೆ ಮಂಜೂರು ಮಾಡಿದ್ದರು. ಆದರೆ, ಫಿಲ್ಲರ್‌ಗಳನ್ನು ಮಾತ್ರ ಹಾಕಿ ಸೇತುವೆ ಕಾಮಗಾರಿ ನಿಲ್ಲಿಸಲಾಗಿದೆ. 10 ಲಕ್ಷ ರೂ. ಬಿಲ್ ಕೂಡ ಆಗಿದೆ ಎಂಬ ಮಾಹಿತಿ ಇದೆ. ಶೀಘ್ರ ಕಾಮಗಾರಿ ಪ್ರಾರಂಭಿಸುವAತೆ ಎಲ್ಲರಿಗೂ ಮನವಿ ಮಾಡಿದ್ದೇನೆ. ಯಾರೂ ಸ್ಪಂದಿಸುತ್ತಿಲ್ಲ ಗ್ರಾಮಸ್ಥರ ಬೇಡಿಕೆಗೆ ಆಡಳಿತ ಸ್ಪಂದಿಸಬೇಕು.
ಪ್ರಶಾಂತ ಗಾಂವಕರ್
ಗೋಟೆಗಾಳಿ ಗ್ರಾಪಂ ಉಪಾಧ್ಯಕ್ಷ