

ಬಾಗಲಕೋಟೆ
ಶವ ಹೂಳಲು ಪ್ರತ್ಯೇಕ ಸ್ಮಶಾನ ಇಲ್ಲವೆಂದು ಆರೋಪಿಸಿ ಬಾಗಲಕೋಟೆ ತಾಲೂಕಿನ ಶೀಗಿಕೇರಿ ಗ್ರಾಮದಲ್ಲಿ ಸೋಮವಾರ ಗ್ರಾಮಸ್ಥರು ರಸ್ತೆ ಮಧ್ಯೆ ಇಮಾನ(ಶವ ಇಟ್ಟು ಹೊತ್ತುಕೊಂಡು ಸಾಗುವ ಸಾಧನ) ಇಟ್ಟು ರಸ್ತೆ ತಡೆ ನಡೆಸಿದರು.
ಗ್ರಾಮಸ್ಥರು ಗ್ರಾಮದ ಹಳ್ಳದಲ್ಲಿ ಶವಸಂಸ್ಕಾರ ಮಾಡುತ್ತಿದ್ದರು. ಇದೀಗ ಹಳ್ಳದಲ್ಲಿ ನೀರು ಇರುವುದರಿಂದ ಶವ ಹೂಳಲು ತೊಂದರೆ ಆಗಿದೆ. ಪ್ರತ್ಯೇಕ ಸ್ಮಶಾನ ಒದಗಿಸುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಈವರೆಗೂ ಜಿಲ್ಲಾಡಳಿತ ಅಲ್ಲಿನ ಸ್ಮಶಾನ ಜಾಗ ಒದಗಿಸಿಲ್ಲ. ಗ್ರಾಮದಲ್ಲಿ ಸೋಮವಾರ ನಿಧನರಾದ 95 ವರ್ಷದ ಶಂಕ್ರಪ್ಪ ಚಲವಾದಿ ಅವರ ಶವ ಸಂಸ್ಕಾರಕ್ಕೆ ಸಮಸ್ಯೆ ಎದುರಾಗಿದ್ದರಿಂದ ರೊಚ್ಚಿಗೆದ್ದ ಜನರು ದಿಢೀರನೇ ರಸ್ತೆ ತಡೆ ಮೂಲಕ ಪ್ರತಿಭಟನೆ ಆರಂಭಿಸಿದರು.
ಬಾಗಲಕೋಟೆ-ರಾಯಚೂರು ರಸ್ತೆ ಬಂದ್ ಮಾಡಿ, ದಾರಿಗೆ ಮುಳ್ಳು ಕಂಟಿ ಹಚ್ಚಿ, ರಸ್ತೆ ಮಧ್ಯೆಯೇ ಇಮಾನ ಇಟ್ಟು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲಿ ನೂರಾರು ವಾಹನಗಳು ಕಿ.ಮೀ. ಗಟ್ಟಲೆ ಸಾಲಿನಲ್ಲಿ ನಿಂತವು. ಸಂಚಾರಕ್ಕೆ ಸಂಚಕಾರ ಆಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಕೆಎಸ್‌ಆರ್‌ಟಿಸಿ ಬಸ್, ಶಾಲೆ ವಿದ್ಯಾರ್ಥಿಗಳ ಬಸ್‌ಗಳೆಲ್ಲ ನಿಂತಿದ್ದರಿಂದ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳುವುದು ದುಸ್ತರವಾಗಿತ್ತು. ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ರಸ್ತೆ ತಡೆ ಕೈಬಿಡುವಂತೆ ಕೋರಿದರು. ಈ ವೇಳೆ ಪೊಲೀಸರ ಜತೆ ವಾಗ್ವಾದವೂ ನಡೆಯಿತು.
ಕಳೆದ ವರ್ಷವೂ ಹೀಗೆ ಶವ ಇಟ್ಟು ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರಿಗೆ ಶೀಘ್ರದಲ್ಲಿ ಸ್ಮಶಾನ ಜಾಗ ಒದಗಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದು, ಈವರೆಗೂ ಬೇಡಿಕೆ ಈಡೇರಿಸಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡದೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬಳಿಕ ಸ್ಥಳಕ್ಕೆ ಬಾಗಲಕೋಟೆ ತಹಸೀಲ್ದಾರ್ ಅಮರೇಶ ಪಮ್ಮಾರ ಆಗಮಿಸಿ ಪ್ರತಿಭಟನಾಕಾರರ ಜತೆ ಮಾತನಾಡಿದರು. ಸ್ಮಶಾನ ಜಾಗ ನೀಡುವವರೆಗೂ ಪ್ರತಿಭಟನೆ ಬಿಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಗ್ರಾಮದಲ್ಲಿ ಸ್ಮಶಾನ ಒದಗಿಸುವ ನಿಟ್ಟಿನಲ್ಲಿ ಬಿಟಿಡಿಎ ಜತೆ ಚರ್ಚಿಸಿ ಸೂಕ್ತ ಜಾಗ ನೀಡಲಾಗುವುದು. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಜನರು ಹೋರಾಟ ಸ್ಥಗಿತಗೊಳಿಸಿದರು. ಬಳಿಕ ಗ್ರಾಮದ ಹೊರವಲಯದ ಗೋಮಾಳ ಬಳಿ ಅಂತ್ಯಸಂಸ್ಕಾರ ನೆರವೇರಿಸಿದರು. ಅಧಿಕಾರಿಗಳು ಸ್ಮಶಾನ ಜಾಗ ಒದಗಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ನೀಡಿದ್ದ ಅಭಯ ಈಡೇರಿಲ್ಲ. ಈಗ ಮತ್ತೊಮ್ಮೆ ಅವರ ಮೇಲೆ ವಿಶ್ವಾಸ ಇಟ್ಟು ಸಹಕಾರ ನೀಡುತ್ತೇವೆ. ಈಗಲೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೆ ಇದ್ದರೆ ಮುಂದಿನ ಸಲ ರಸ್ತೆ ಮಧ್ಯದಲ್ಲೇ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ರಸ್ತೆ ತಡೆಯಲ್ಲಿ ಮಹಿಳೆಯರು ಸಹ ಪಾಲ್ಗೊಂಡಿದ್ದರು.