

ವಿಜಯಪುರ: ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಕನ್ನೂರ ಹಾಗೂ ಮಡಸನಾಳ ಗ್ರಾಮ ಒಳಗೊಂಡು ಸುತ್ತಲಿನ ಗ್ರಾಮಗಳ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ವಿಜಯಪುರ ತಾಲೂಕು ವ್ಯಾಪ್ತಿಯಲ್ಲಿರುವ ಕನ್ನೂರ, ಮಡಸನಾಳ, ಕನ್ನೂರ ದರ್ಗಾ, ಕನ್ನೂರ ತಾಂಡಾ, ಕನ್ನಾಳ, ಗುಣಕಿ ಬೊಮ್ಮನಹಳ್ಳಿ, ಮಿಂಚನಾಳ ಮತ್ತು ಮಿಂಚನಾಳ ತಾಂಡಾ, ಶಿರನಾಳ, ಮಖಣಾಪುರ ಮತ್ತು ಮಖಣಾಪುರ ತಾಂಡಾ, ತಿಡಗುಂದಿ ಹಾಗೂ ಡೊಮನಾಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ಕೆರೆಗಳಿಗೆ ನೀರು ತುಂಬಿಸಬೇಕು.ರೇವಣ ಸಿದ್ಧೇಶ್ವರ ಏತ ನೀರಾವರಿ ಕಾಮಗಾರಿ ಕೈಗೊಳ್ಳಬೇಕೆಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನಕ್ಕೆ ಬಾರದಾಗಿದೆ. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಖಂಡ ಸತೀಶ ಪಾಟೀಲ ಮಾತನಾಡಿ, ಕನ್ನೂರ, ಮಡಸನಾಳ ಸೇರಿದಂತೆ 14 ಗ್ರಾಮಗಳಲ್ಲಿ ರೇವಣಸಿದ್ಧೇಶ್ವರ ಏತ ನೀರಾವರಿಯಡಿ ಮೂರು ಜಾಕ್‌ವೆಲ್‌ಗಳ ಅವಶ್ಯಕತೆ ಇದ್ದು, ಕೂಡಲೇ ಅಳವಡಿಸಿ ಸಮಗ್ರ ನೀರಾವರಿ ಮಾಡಬೇಕು ಎಂದರು.
ಗುರು ಅಚಕನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರುಗಳು ಭಾಗವಹಿಸಿದ್ದರು.