ಸೋನಿಯಾ ಗಾಂಧಿ ವಿರುದ್ಧದ ಆರೋಪ ಸಾಬೀತುಪಡಿಸುವಂತೆ ಕಂಗನಾಗೆ ಸವಾಲು; ಸಚಿವ Vikramaditya Singh ಹೇಳಿದ್ದಿಷ್ಟು..

sonia gandhi and kangana ranaut
Published on

ಶಿಮ್ಲಾ: ರಾಜ್ಯ ಸರ್ಕಾರ ಸಾಲ ಪಡೆದು ಸೋನಿಯಾ ಗಾಂಧಿಗೆ ಹಣ ನೀಡಿದೆ ಎಂಬ ಆರೋಪವನ್ನು ಸಾಬೀತುಪಡಿಸುವಂತೆ ಮಂಡಿ ಸಂಸದೆ ಕಂಗನಾ ರಣಾವತ್‌ಗೆ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್(Vikramaditya Singh) ಸೋಮವಾರ (ಸೆಪ್ಟೆಂಬರ್​ 23) ಸವಾಲು ಹಾಕಿದ್ದೆದಾರೆ. ಕಂಗನಾ ರಣಾವತ್ ಆರೋಪ ಸಾಬೀತುಪಡಿಸದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಕಾಂಗ್ರೆಸ್ ತಿಳಿಸಿದ್ದಾರೆ.

ಕಂಗನಾ ರಣಾವತ್ ಅವರ ಹೇಳಿಕೆಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆಯ ಬೌದ್ಧಿಕ ದಿವಾಳಿತನವನ್ನು ಪ್ರತಿಬಿಂಬಿಸುತ್ತದೆ ಎಂದು ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಟೀಕಿಸಿದ್ದಾರೆ. ಕೇಂದ್ರದಿಂದ ಬರುವ ಹಣವನ್ನು ಅಥವಾ ರಾಜ್ಯದ ಅಭಿವೃದ್ಧಿ ನಿಧಿಯನ್ನು ಸೋನಿಯಾ ಗಾಂಧಿಗೆ ನೀಡುತ್ತಿದ್ದಾರೆ ಎನ್ನುವುದಕ್ಕಿಂತ ಮೂರ್ಖತನದ ಹೇಳಿಕೆ ಇನ್ನೊಂದಿಲ್ಲ ಎಂದು ಹೇಳಿದರು. ಸಂಸದೆಯಾಗಿ ಕಂಗನಾ ಅವರನ್ನು ನಾವು ಗೌರವಿಸುತ್ತೇವೆ, ಆದರೆ ಅವರು ನಮ್ಮ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಹೇಳಿಕೆ ನೀಡಿರುವ ರೀತಿ ದುರದೃಷ್ಟಕರ. ಅನಕ್ಷರಸ್ಥರೂ ಇದನ್ನು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

Himachal Pradesh minister Vikramaditya Singh

ಕ್ಷಮೆಯಾಚಿಸಬೇಕು ಇಲ್ಲವೆ ಸಾಬೀತುಪಡಿಸಬೇಕು:

ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರಿಗೆ ನಾನು ಬಹಿರಂಗವಾಗಿ ಸವಾಲು ಹಾಕುತ್ತೇನೆ. ಒಂದೇ ಒಂದು ರೂಪಾಯಿ ದುರುಪಯೋಗದ ಬಗ್ಗೆ ಪುರಾವೆ ತೋರಿಸಬೇಕು ಇಲ್ಲಎವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಇಂತಹ ಆಧಾರರಹಿತ ಮತ್ತು ಅನ್ಯಾಯದ ಆರೋಪಗಳನ್ನು ಮಾಡಿದ್ದಕ್ಕಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾಂಗ್ರೆಸ್ ಮಾನನಷ್ಟ ಮೊಕದ್ದಮೆ ಹೂಡಲಿದೆ ಎಂದು ಸಚಿವರು ಸ್ಪಷ್ಟವಾಗಿ ತಿಳಿಸಿದರು.

ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸಲು ಶಿಮ್ಲಾದ ಗ್ರಾಮಕ್ಕೆ ಆಗಮಿಸಿದ್ದ ಕಂಗನಾ ರಣಾವತ್​​ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಹಿಮಾಚಲ ಪ್ರದೇಶ ಸರ್ಕಾರ ಪಡೆದ ಸಾಲವನ್ನು ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ನೀಡಿರುವುದರಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ನಾವು (ಕೇಂದ್ರ) ವಿಪತ್ತು ನಿಧಿ ನೀಡಿದರೆ ಅದು ಸಿಎಂ ಪರಿಹಾರ ನಿಧಿಗೆ ಹೋಗುತ್ತದೆ, ಆದರೆ ಅಲ್ಲಿಂದ ಅದು ಸೋನಿಯಾ ಪರಿಹಾರ ನಿಧಿಗೆ ಹೋಗುತ್ತದೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಭಾನುವಾರ ಆರೋಪಿಸಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net