

ಇಂದೋರ್: ಚುನಾವಣೆ ಸ್ಪರ್ಧೆಗೆ ಪಕ್ಷದ ಲಿಸ್ಟ್ನಲ್ಲಿ ಹೆಸರಿಲ್ಲದಿದ್ದರೆ ಅಸಮಾಧಾನ ಹೊರಹಾಕುವವರನ್ನು ಕಾಣಬಹುದು, ಆದರೆ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಲಿಸ್ಟ್ನಲ್ಲಿ ಹೆಸರಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯವರ್ಗೀಯ ಈ ವಯಸ್ಸಲ್ಲಿ ಮತದಾರರಿಗೆ ನಾನು ಕೈ ಮುಗಿದು ಮತ ಬೇಡಬೇಕಾ ಎಂದು ಪ್ರಶ್ನಿಸುವ ಮೂಲಕ ತನಗೆ ಸ್ಪರ್ಧೆಗೆ ಆಸಕ್ತಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇಂದೋರ್ 1 ಕ್ಷೇತ್ರದಿಂದ ಅವರ ಹೆಸರು ಪಟ್ಟಿಯಲ್ಲಿದೆ. ಲಿಸ್ಟ್ನಲ್ಲಿ ತನ್ನ ಹೆಸರು ಕಂಡು ಅಚ್ಚರಿಯಾಯಿತು. ಹಿರಿಯ ನಾಯಕನಾಗಿ ಸಭೆಗಳಲ್ಲಿ ಮಾತ್ರ ಮಾತನಾಡುವ ನನಗೆ ಸ್ಪರ್ಧೆಗೆ ಆಸಕ್ತಿ ಇರಲಿಲ್ಲ. ಸ್ಪರ್ಧೆಗೆ ಮಾನಸಿಕವಾಗಿ ಸಿದ್ಧನಿರಬೇಕಿರುತ್ತದೆ. ಗೆಲುವಿಗೆ ಪೂರ್ವಸಿದ್ಧತೆಯೂ ಅಗತ್ಯವಿರುತ್ತದೆ. ಆದರೆ ಇದಾವುದೂ ಇಲ್ಲದಿರುವುದರಿಂದ ನನಗೆ ಸ್ಪರ್ಧೆಗೆ ಆಸಕ್ತಿಯಿಲ್ಲ. ಮೇಲಾಗಿ ಹಿರಿಯನಾದ ನಾನು ನಿಮ್ಮನ್ನೆಲ್ಲ ಕೈಮುಗಿದು ಮತ ಕೇಳಬೇಕಾ ಎಂದು ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಭೆಗಳಲ್ಲಿ ಭಾಷಣಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ. 5 ಸಮಾವೇಶಗಳಿಗೆ ಹೆಲಿಕಾಪ್ಟರ್ ನಲ್ಲಿ, 3 ಕ್ಕೆ ಕಾರ್ನಲ್ಲಿ ಪ್ರಯಾಣಿಸಬೇಕಿದೆ. ಆದರೆ ನಾವು ಅಂದುಕೊಳ್ಳುವುದು ಒಂದು, ನಡೆಯುವುದು ಮತ್ತೊಂದು ಎನ್ನುವಂತಾಗಿದೆ. ಆದರೂ ಸಹ ಪಕ್ಷ ನಿಯೋಜಿಸಿರುವ ಕಡೆ ತೆರಳಿ ನ್ಯಾಯ ಒದಗಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ವಿಜಯವರ್ಗೀಯ ಇಂದೋರ್ ನಗರಕ್ಕೆ ಮೇಯರ್ ಆಗಿದ್ದವರು. ಕೇಂದ್ರ ಸಚಿವರೂ ಆಗಿದ್ದವರು. ಪ್ರಸ್ತುತ ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರ ಪುತ್ರ ಇಂದೋರ್ 3 ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.