ನಮ್ಮ ತಂದೆ ರಾಜಕೀಯದಿಂದ ಹಿಂದೆ ಸರಿದಿದ್ದಾರೆ ಹೊರತು, ಸಕ್ರಿಯ ರಾಜಕಾರಣದಿಂದಲ್ಲ: ವಿಜಯೇಂದ್ರ ಸ್ಪಷ್ಟನೆ

Vijayendra
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ರಾಜಕಾರಣದಿಂದಲೇ ಹಿಂದೆ ಸರಿದಿದ್ದಾರೆಯೇ ಎಂಬ ಗೊಂದಲಗಳಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಟೌನ್​ಹಾಲ್​ನಲ್ಲಿ ನಡೆದ ಕುಂಬಾರರ ಸಮುದಾಯದ ಸಮಾವೇಷದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ವಿಚಾರ ನಾನೂ ಒಪ್ಪೋದಿಲ್ಲ,ತಂದೆಯವರು ಕಾರ್ಯಕರ್ತರ ಮಾತಿಗೆ ಉತ್ತರ ಕೊಟ್ಟಿದ್ದಾರೆ, ಅವರ ಆದೇಶವನ್ನು ನಾನು ಪಾಲಿಸಬೇಕಾಗುತ್ತದೆ ಎಂದಿದ್ದಾರೆ.

ಅಲ್ಲದೇ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ ಹೊರತು ಸಕ್ರಿಯ ರಾಜಕಾರಣದಿಂದ ಅಲ್ಲ. ಪಕ್ಷ ಏನೇ ನಿರ್ಧಾರ ಕೈಗೊಂಡರೂ ಕೂಡ ಪಾಲಿಸುತ್ತೇನೆ. ಯಡಿಯೂರಪ್ಪ ಘೋಷಣೆ ಬಳಿಕ ಹಲವಾರು ಚರ್ಚೆ ಆಗ್ತಿದೆ, ಪಕ್ಷದ ಹಿತದೃಷ್ಟಿಯಿಂದ ನಮ್ಮ ತಂದೆಯವರು ತೀರ್ಮಾನ ಮಾಡುತ್ತಾರೆ. ಅವರು ಪಕ್ಷಕ್ಕೆ ಒಳ್ಳೆಯದಾಗಬೇಕೆಂಬ ಕಾರಣದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ನಾನು ರಾಜ್ಯದಾದ್ಯಂತ ಪ್ರವಾಸ ಮಾಡಿ ಹಳೆ ಮೈಸೂರು ಭಾಗದಲ್ಲಿ ಗಟ್ಟಿಗೊಳಿಸಬೇಕು ಎನ್ನುವ ಅಪೇಕ್ಷೆ ಇದೆ. ತಮ್ಮ ಮಕ್ಕಳು ತಮ್ಮ ಪರಿಶ್ರಮದಿಂದ ಮುಂದೆ ಬರಬೇಕು ಅಂತ ನಮ್ಮ ತಂದೆಯವರ ಆಸೆಯೂ ಆಗಿದೆ. ವಿಜಯೇಂದ್ರಗೆ ಶಕ್ತಿ ಇದೆ ಅಂತ ಪಕ್ಷಕ್ಕೆ ಅನಿಸಿದರೆ ಪಕ್ಷ ಜವಾಬ್ದಾರಿ ನೀಡುತ್ತದೆ ಎಂದು ಹೇಳಿದರು.

ಪಿಎಸ್ಐ ಹಗರಣ ಕಾಂಗ್ರೆಸ್ ಪಕ್ಷದ ಕೂಸು: ಇದರಲ್ಲಿ ನನ್ನ ಹೆಸರು ಹೇಳಿದ ಪುಣ್ಯಾತ್ಮ ಯಾರು?

ಪಿಎಸ್ಐ ಹಗರಣದಲ್ಲಿ ಯಾವ ಪುಣ್ಯಾತ್ಮ ನನ್ನ ಹೆಸರು ಹೇಳಿದವನು ಎಂದು ಪ್ರಶ್ನಿಸಿದ ವಿಜಯೇಂದ್ರ, ಈ ಬಗ್ಗೆ ಸಿದ್ದರಾಮಯ್ಯನವರಿಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ಕಪೋಲ ಕಲ್ಪಿತ ಪ್ರಶ್ನೆಗಳಿಗೆಲ್ಲ ನಾನು ಉತ್ತರಿಸುವುದಿಲ್ಲ, ಅಕಸ್ಮಾತ್ ಅಧಿಕೃತವಾಗಿ ಪಿಎಸ್ಐ ಅಕ್ರಮದಲ್ಲಿ ನನ್ನ ಹೆಸರು ಕೇಳಿ ಬಂದರೆ ನಾನು ಚುನಾವಣೆಗೇ ನಿಲ್ಲುವುದಿಲ್ಲ ಎಂದು ಸವಾಲು ಹಾಕಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net