

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯಲಿರುವ ಚುನಾವಣೆಗೆ ಮೂರೂ ಪಕ್ಷಗಳು ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅವರೆಲ್ಲರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಈ ನಡುವೆ, ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪಕ್ಷಗಳಲ್ಲಿ ಕುದಿಮೌನ ತಣ್ಣಗೆ ಸ್ಪೋಟಗೊಂಡಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಏಳು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬುಧವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮತದಾನಕ್ಕೆ ಜೂ.3 ಸಮಯ ನಿಗದಿಯಾಗಿದೆ. ಒಂದೊಮ್ಮೆ ನಾಮಪತ್ರಗಳು ಒಪ್ಪಿತವಾದರೆ ಏಳೂ ಜನರು ಪರಿಷತ್ ಪ್ರವೇಶಿಸುವುದು ಖಚಿತವಾದಂತೆ.
ಬಿಜೆಪಿಯಿಂದ ಸ್ಪರ್ಧಿಸಿರುವ ಲಕ್ಷ್ಮಣ ಸವದಿ, ಕಾಂಗ್ರೆಸ್ನ ಅಬ್ದುಲ್ ಜಬ್ಬಾರ್, ಜೆಡಿಎಸ್ನ ಶರವಣ ಮೇಲ್ಮನೆಯಲ್ಲಿ ಒಮ್ಮೆ ಸದಸ್ಯರಾಗಿದ್ದು, ಮರು ಆಯ್ಕೆ ಬಯಸಿದ್ದಾರೆ. ಉಳಿದಂತೆ ಹೇಮಲತಾ ನಾಯಕ್, ಕೇಶವ ಪ್ರಸಾದ್, ಛಲವಾದಿ ನಾರಾಯಣ ಸ್ವಾಮಿ ಮತ್ತು ನಾಗರಾಜ ಯಾದವ್ ಮೊದಲ ಬಾರಿಗೆ ಪರಿಷತ್ ಪ್ರವೇಶ ಮಾಡುವವರಾಗಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಒಂದಷ್ಟು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಮೊದಲು ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ. ಶರವಣ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಜತೆ ಮಾಜಿ ಮುಖ್ಯಮಂತ್ರಿ ಎಚ್.ಡಿ .ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಉಪಸ್ಥಿತರಿದ್ದರು. ಅವರು ಎರಡನೇ ಸೆಟ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶಾಸಕರಾದ ಬಂಡೆಪ್ಪ ಕಾಶಂಪುರ, ಎ.ಮಂಜುನಾಥ್, ಮೂರನೇ ಸೆಟ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶಾಸಕರಾದ ಪುಟ್ಟರಾಜು ಹಾಗೂ ಸುರೇಶ್ಗೌಡ ಇದ್ದರು. ಬಳಿಕ ಕಾಂಗ್ರೆಸ್ ಅಭ್ಯಥಿಗಳ ನಾಮಪತ್ರ ಸಲ್ಲಿಸುವ ಸರದಿ. ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಒಟ್ಟಾಗಿ ಬಂದ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ಉಮೇದುವಾರಿಕೆ ಪ್ರಕ್ರಿಯೆ ನಡೆಸಿದರು.
ಅಬ್ದುಲ್ ಜಬ್ಬಾರ್ ನಾಮಪತ್ರ ಸಲ್ಲಿಕೆ ವೇಳೆ ಎಂ.ಬಿ.ಪಾಟೀಲ್ ಹಾಗೂ ಆರ್.ವಿ.ದೇಶಪಾಂಡೆ, ಎರಡನೇ ಪ್ರತಿ ಸಲ್ಲಿಸುವಾಗ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮೂರನೇ ಪ್ರತಿ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹಾಗೂ ಸಲೀಂ ಅಹ್ಮದ್ ಉಪಸ್ಥಿತರಿದ್ದರು.
ಬಿಜೆಪಿ ಅಭ್ಯರ್ಥಿಗಳಾಗಿ ಲಕ್ಷ್ಮಣ ಸವದಿ, ಕೇಶವ ಪ್ರಸಾದ್, ಛಲವಾದ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸುವಾಗ ಪಕ್ಷದ ರಾಜ್ಯ ಅಧ್ಯಕ್ಷರೂ ಸೇರಿದಂತೆ ಸಚಿವಾದ ಉಮೇಶ್ ಕತ್ತಿ, ಆರ್.ಅಶೋಕ್ ಹಾಗೂ ಸಿ.ಸಿ.ಪಾಟೀಲ್ , ಕೆ.ಗೋಪಾಲಯ್ಯ, ಶಾಸಕರಾದ ಸಂಜೀವ್ ಮಠಂದೂರು ಜತೆಗಿದ್ದರು. ಬಿಜೆಪಿ ಮೂರನೇ ಅಭ್ಯರ್ಥಿಯಾಗಿ ಛಲವಾದಿ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸುವಾಗ ಸಚಿವ ಶಿವರಾಂ ಹೆಬ್ಬಾರ್ ಇದ್ದರು.
ಹೇಮಲತಾ ನಾಯಕ್ ಕೊಪ್ಪಳದಿಂದ ಆಗಮಿಸಲು ತಡವಾಗಿದ್ದರಿಂದ ಅವರು ಕೊನೆಯಲ್ಲಿ ಈ ತಂಡವನ್ನು ಸೇರಿಕೊಂಡರು. ಅವರೊಂದಿಗೆ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಶಾಸಕ ರವಿಸುಬ್ರಹ್ಮಣ್ಯ ಹಾಗೂ ಚಂದ್ರಶೇಖರ ಪಾಟೀಲ್ ಜತೆಗಿದ್ದರು.
ಬಿಜೆಪಿಯಲ್ಲಿ ಕಸರತ್ತು: ಮಂಗಳವಾರ ಬೆಳಗ್ಗೆ 10 ಗಂಟೆವರೆಗೂ ಬಿಜೆಪಿ ಪಟ್ಟಿ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಪಕ್ಷದ ಕಚೇರಿಯಲ್ಲಿ ಸಂಭಾವ್ಯ ಅಭ್ಯರ್ಥಿಗಳಿಗೆ ಬರಲು ಹೇಳಿ ನಾಮಪತ್ರ ಸಲ್ಲಿಕೆಗೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಆ ಪ್ರಕಾರವೇ ಮೂವರು ಸಿದ್ಧತೆ ನಡೆಸಿದ್ದರು. ಬೆಳಗ್ಗೆ 11 ಗಂಟೆಗೆ ಕೇಂದ್ರ ಬಿಜೆಪಿ ನಾಯಕರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು. ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಹೆಸರು ಅಂತಿಮಗೊಂಡಿದ್ದೂ ಈ ಪಟ್ಟಿಯಲ್ಲೇ. ಅಲ್ಲಿವರೆಗೂ ಅನಿಶ್ಚಿತತೆ ಇತ್ತು. ನಂತರವಷ್ಟೇ ಕೊಪ್ಪಳದಲ್ಲಿದ್ದ ಅಭ್ಯರ್ಥಿ ಹೇಮಲತಾ ನಾಯಕ್ ಅವರನ್ನು ತುಮಕೂರಿನಿಂದ ಜಕ್ಕೂರಿಗೆ ಏರ್ಲಿಫ್ಟ್ಮಾಡಿ ಕಾನ್ವಾಯ್ನಲ್ಲಿ ವಿಧಾನಸೌಧಕ್ಕೆ ಕರೆತಂದಾಗ ಮಧ್ಯಾಹ್ನ 2 ಗಂಟೆ ದಾಟಿತ್ತು.
ಸಮುದಾಯದ ಲೆಕ್ಕಾಚಾರ: ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಅವಕಾಶ ನೀಡಿದ್ದರೆ, ಬಿಜೆಪಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಿದೆ. ಇದರಲ್ಲಿ ಪ್ರದೇಶವಾರು ಮತ್ತು ಮಹಿಳಾ ಪ್ರಾತಿನಿಧ್ಯ ನೀಡಲಾಗಿದೆ. ಜೆಡಿಎಸ್ ಜಾತಿ ಲೆಕ್ಕಾಚಾರ ಹೊರತಾಗಿ ಅವಕಾಶ ನೀಡಿದೆ.
ತಣಿಯದ ಮುನಿಸು: ಬಿ.ವೈ.ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದರ ಬಗ್ಗೆ ಬಿಎಸ್ವೈ ಬಳಗದಲ್ಲಿ ಅಸಮಾಧಾನ ಆವರಿಸಿದೆ. ಲಕ್ಷ್ಮಣ ಸವದಿ ಮರು ಆಯ್ಕೆ ಅವಕಾಶದ ಬಗ್ಗೆಯೂ ಕಿಡಿಹೊತ್ತಿದೆ. ಅದೇ ರೀತಿ ಮರಾಠ ಸಮುದಾಯದ ಕಾರ್ಯಕರ್ತರು ಸಿಟ್ಟುಕೊಂಡಿದ್ದಾರೆ. ಕಾಂಗ್ರೆಸ್ ವಿಚಾರಕ್ಕೆ ಬಂದರೆ, ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕಾರ್ಯಕರ್ತರು ಈ ಆಯ್ಕೆ ಬಗ್ಗೆ ಬುಸುಗುಡುತ್ತಿದ್ದಾರೆ. ಅವಕಾಶ ಕೊಟ್ಟವರಿಗೆ ಮತ್ತೆ ಅವಕಾಶ ಎಂಬ ಅಪಸ್ವರ ಕೇಳಿಬಂದಿದೆ. ಜೆಡಿಎಸ್ನಲ್ಲಿ ಕೂಡ ಶರವಣ ಬದಲು ಬೇರೆಯವರಿಗೆ ಅವಕಾಶ ಕೊಡಬೇಕಿತ್ತು ಎಂಬ ದನಿ ಇದೆ.
ಶರವಣ ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಬಸವನಗುಡಿ, ಚಿಕ್ಕಪೇಟೆ ಎರಡೂ ಕ್ಷೇತ್ರ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಅವರಿಗೆ ಟಾಸ್ಕ್ ನೀಡಲಾಗಿದೆ. | ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ನಾಯಕ ನಾನು ಬೇಸಿಗೆಯಲ್ಲಿ ಒಣಗಲ್ಲ, ಮಳೆಗಾಲದಲ್ಲಿ ಚಿಗುರುವುದಿಲ್ಲ. ಒಂದೇ ಥರ ಇರುತ್ತೇನೆ. ವಿಜಯೇಂದ್ರಗೆ ರಾಷ್ಟ್ರೀಯ ನಾಯಕರು ಬೇರೆ ಜವಾಬ್ದಾರಿ ಕೊಡುತ್ತಾರೆ. | ಲಕ್ಷ್ಮಣ ಸವದಿ, ಪರಿಷತ್ ಅಭ್ಯರ್ಥಿ ಕುಟುಂಬಕ್ಕೆ ಬಂದ ಸೊಸೆಯನ್ನು ಪ್ರತ್ಯೇಕವಾಗಿ ನೋಡಲ್ಲ. ಅಂತೆಯೇ ಆಯ್ಕೆ ನಡೆದಿದೆ. ಕೋರ್ ಕಮಿಟಿ ಕಳುಹಿಸಿದ ಹೆಸರಲ್ಲಿ 4ನ್ನು ನಮ್ಮ ರಾಷ್ಟ್ರೀಯ ನಾಯಕರ ತಂಡ ಪ್ರಕಟಿಸಿದೆ. | ಬಿಜೆಪಿ ರಾಜ್ಯಾಧ್ಯಕ್ಷ ಪರಿಷತ್ ಸ್ಥಾನಕ್ಕೆ ಬಹಳಷ್ಟು ಟಿಕೆಟ್ ಆಕಾಂಕ್ಷಿಗಳಿದ್ದರು. ಅವರಿಗೆ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸಲಾಗುವುದು. ಹಿಂದೆ ಹೆಚ್ಚು ಪ್ರಾತಿನಿಧ್ಯ ನೀಡದವರಿಗೆ ಆದ್ಯತೆ ನೀಡಲಾಗಿದೆ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ವಿಜಯೇಂದ್ರಗೆ ನಿರಾಕರಣೆ: ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರಗೆ ಪರಿಷತ್ ಚುನಾವಣೆಯಲ್ಲಿ ಅವಕಾಶ ನೀಡಿ ಸಂಪುಟ ಪುನಾರಚನೆ ವೇಳೆ ಪರಿಗಣಿಸುವ ಬಗ್ಗೆ ನಡೆದಿದ್ದ ಚರ್ಚೆಗೆ ಬಿಜೆಪಿ ವರಿಷ್ಠರು ಬ್ರೇಕ್ ಹಾಕಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ವಿಜಯೇಂದ್ರಗೆ ಅವಕಾಶ ಕೊಡದೆ, ಅವರದೇ ಸಮುದಾಯದ ಸವದಿಗೆ ಮತ್ತೆ ಮಣೆ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
ಬಲಾಬಲ ಲೆಕ್ಕಾಚಾರ: 75 ಸದಸ್ಯ ಬಲದ ಪರಿಷತ್ನಲ್ಲಿ ಪ್ರಸ್ತುತ 36 ಮಂದಿ ಬಿಜೆಪಿ ಸದಸ್ಯರಿದ್ದರೆ, 25 ಮಂದಿ ಕಾಂಗ್ರೆಸ್ ಹಾಗೂ 10 ಮಂದಿ ಜೆಡಿಎಸ್ನವರಿದ್ದಾರೆ. ಈ ಚುನಾವಣೆ ಬಳಿಕ ಬಿಜೆಪಿ ಬಲ 38ಕ್ಕೆ ಹಿಗ್ಗಲಿದೆ. ಕಾಂಗ್ರೆಸ್ ಶಕ್ತಿ 24ಕ್ಕೆ ಕುಗ್ಗಿದರೆ, ಜೆಡಿಎಸ್ 9 ಸ್ಥಾನಕ್ಕೆ ಸೀಮಿತಗೊಳ್ಳಲಿದೆ.