‘ವಿಜಯವಾಣಿ’ ಐಪಿಎಲ್ ಕನಸಿನ ತಂಡದಲ್ಲಿ ಯಾರ‌್ಯಾರಿದ್ದಾರೆ ಗೊತ್ತೇ?

ipl trophy web
Published on

ಬೆಂಗಳೂರು: ವೈವಿಧ್ಯತೆಯಲ್ಲಿ ಏಕತೆಯೇ ಐಪಿಎಲ್‌ನ ವಿಶೇಷತೆ. ವಿವಿಧ ರಾಜ್ಯ, ದೇಶಗಳ ಆಟಗಾರರು ಒಟ್ಟಾಗಿ ಆಡುವ ಶ್ರೀಮಂತ ಟೂರ್ನಿ ದೂರದ ಅರಬ್ ರಾಷ್ಟ್ರದಲ್ಲಿ ಯಶಸ್ವಿಯಾಗಿ ನಡೆದು, ಮುಂಬೈ ಇಂಡಿಯನ್ಸ್ ತಂಡ 5ನೇ ಬಾರಿ ಚಾಂಪಿಯನ್ ಪಟ್ಟವೇರುವುದರೊಂದಿಗೆ ಮುಕ್ತಾಯ ಕಂಡಿದೆ. ತವರು ನೆಲದ ಲಾಭ, ಎದುರಾಳಿ ನೆಲದ ಭೀತಿ ಇಲ್ಲದ ಈ ಬಾರಿಯ ಟೂರ್ನಿ ಅತ್ಯಂತ ಸ್ಪರ್ಧಾತ್ಮಕವೆನಿಸಿತ್ತು. ಇದೇ ಮೊದಲ ಬಾರಿಗೆ ಎಲ್ಲ ತಂಡಗಳು ಕನಿಷ್ಠ 6 ಪಂದ್ಯ ಜಯಿಸಿದ್ದು ಇದಕ್ಕೆ ಸಾಕ್ಷಿ. ಟೂರ್ನಿಯುದ್ದಕ್ಕೂ ಸ್ಥಿರ ನಿರ್ವಹಣೆ ತೋರಿದ ಮತ್ತು ಗೆಲುವಿನ ಆಟವಾಡಿದ ಆಟಗಾರರನ್ನು ಆಯ್ದು ಐಪಿಎಲ್ 13ನೇ ಆವೃತ್ತಿಯ ಕನಸಿನ ತಂಡವನ್ನು ‘ವಿಜಯವಾಣಿ’ ಸಿದ್ಧಪಡಿಸಿದೆ.

ನಾಲ್ವರು ವಿದೇಶಿ ಆಟಗಾರನ್ನಷ್ಟೇ ಆಡಿಸುವ ಐಪಿಎಲ್ ನಿಯಮವನ್ನೂ ಕನಸಿನ ತಂಡದಲ್ಲಿ ಪಾಲಿಸಲಾಗಿದೆ. ಅಲ್ಲದೆ ಪ್ರತಿ ತಂಡದಿಂದಲೂ ಆಟಗಾರರಿರುವಂತೆ ಆದ್ಯತೆ ನೀಡಲಾಗಿದೆ. ಬ್ಯಾಟಿಂಗ್ ಕ್ರಮಾಂಕ ಪ್ರಕಾರ ಮತ್ತು ಸಮತೋಲನದ ತಂಡದ ಆಯ್ಕೆಯ ಹಿನ್ನೆಲೆಯಲ್ಲಿ, ಟೂರ್ನಿಯಲ್ಲಿ ಸ್ಥಿರ ನಿರ್ವಹಣೆ ತೋರಲು ವಿಫಲರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶಿಖರ್ ಧವನ್, ಸ್ಟೀವನ್ ಸ್ಮಿತ್, ಎಬಿ ಡಿವಿಲಿಯರ್ಸ್‌ರಂಥ ಸ್ಟಾರ್ ಆಟಗಾರರು ಸ್ಥಾನ ಪಡೆದಿಲ್ಲ. ವಿದೇಶಿ ಕೋಟದ ಸೀಮಿತ ಪರಿಮಿತಿಯಿಂದಾಗಿ ಡೇವಿಡ್ ವಾರ್ನರ್, ಟ್ರೆಂಟ್ ಬೌಲ್ಟ್, ಆನ್ರಿಚ್ ನೋರ್ಜೆ, ಕ್ವಿಂಟನ್ ಡಿಕಾಕ್ ಸ್ಥಾನ ವಂಚಿತರಾಗಿದ್ದಾರೆ. ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್ ಟೂರ್ನಿಯಲ್ಲಿ ಬೌಲಿಂಗ್‌ಗಿಂತ ಬ್ಯಾಟಿಂಗ್‌ಗೆ ಆದ್ಯತೆ ನೀಡಿದ ಕಾರಣ ಆಲ್ರೌಂಡರ್‌ಗಳ ಸ್ಥಾನಕ್ಕೆ ಸಮರ್ಥರೆನಿಸಲಿಲ್ಲ. ಒಟ್ಟಾರೆ ಒಂದೆರಡು ಪಂದ್ಯಗಳಲ್ಲಿ ಮಿಂಚಿದ್ದಕ್ಕಿಂತ ಹೆಚ್ಚಾಗಿ ಟೂರ್ನಿಯುದ್ದಕ್ಕೂ ಗಮನಸೆಳೆದ ಮತ್ತು ಗೆಲುವಿಗೆ ಹೆಚ್ಚಿನ ಕೊಡುಗೆ ನೀಡಿದ ಆಟಗಾರರಿಗೆ ವಿಜಯವಾಣಿ ಡ್ರೀಮ್ ಟೀಮ್‌ನಲ್ಲಿ ಸ್ಥಾನ ಕಲ್ಪಿಸಲಾಗಿದೆ.

1. ಕೆಎಲ್ ರಾಹುಲ್ (ನಾಯಕ, ವಿ. ಕೀ)

ಟೂರ್ನಿಯುದ್ದಕ್ಕೂ ನಾಯಕನ ಆಡವಾಡುತ್ತ ಬಂದ ಏಕೈಕ ನಾಯಕ ಕೆಎಲ್ ರಾಹುಲ್. ಹೀಗಾಗಿ ವಿಜಯವಾಣಿ ಡ್ರೀಮ್ ಟೀಮ್‌ಗೂ ಅವರೇ ಸಮರ್ಥ ನಾಯಕರೆನಿಸಿದ್ದಾರೆ. ಜತೆಗೆ ವಿಕೆಟ್ ಕೀಪರ್ ಮತ್ತು ಆರಂಭಿಕನ ಜವಾಬ್ದಾರಿ ನಿಭಾಯಿಸಬೇಕಾಗಿದೆ.

ಪಂದ್ಯ: 14, ರನ್: 670, ಸರಾಸರಿ: 55.83, 100/50: 1/5, ಕ್ಯಾಚ್: 10.

2. ದೇವದತ್ ಪಡಿಕಲ್

2ನೇ ಆರಂಭಿಕನ ಆಯ್ಕೆ ತುಸು ಸವಾಲಿನದ್ದು. ಮಯಾಂಕ್ ಅಗರ್ವಾಲ್, ಶಿಖರ್ ಧವನ್, ಡೇವಿಡ್ ವಾರ್ನರ್, ಕ್ವಿಂಟನ್ ಡಿಕಾಕ್, ಲೀಗ್‌ನ ಕೊನೆಯಲ್ಲಿ ಋತುರಾಜ್ ಗಾಯಕ್ವಾಡ್ ಮತ್ತು ಫೈನಲ್‌ನಲ್ಲಿ ರೋಹಿತ್ ಶರ್ಮ ಮಿಂಚಿದರು. ಆದರೆ ಸ್ಥಿರ ನಿರ್ವಹಣೆಯ ಆಧಾರದಲ್ಲಿ ಕನ್ನಡಿಗ ದೇವದತ್ ಪಡಿಕಲ್ ಆಯ್ಕೆಯಾಗಿದ್ದಾರೆ.

ಪಂದ್ಯ: 15, ರನ್: 473, ಸರಾಸರಿ: 31.53, 50: 5, ಕ್ಯಾಚ್: 8.

3. ಕ್ರಿಸ್ ಗೇಲ್

ಆಡಿದ್ದು ಏಳೇ ಪಂದ್ಯಗಳಾದರೂ, ಟಿ20 ಕ್ರಿಕೆಟ್‌ನಲ್ಲಿ ತಾನೇಕೆ ಅಪಾಯಕಾರಿ ಬ್ಯಾಟ್ಸ್‌ಮನ್ ಎಂದು ಕ್ರಿಸ್ ಗೇಲ್ 41ನೇ ವಯಸ್ಸಿನಲ್ಲೂ ನಿರೂಪಿಸಿದರು. 23 ಸಿಕ್ಸರ್, 3 ಅರ್ಧಶತಕ ಬಾರಿಸಿ ಕಿಂಗ್ಸ್ ಇಲೆವೆನ್ ತಂಡದ ದೆಸೆಯನ್ನೇ ಒಂದು ಮಟ್ಟಿಗೆ ಬದಲಾಯಿಸಿದ್ದರು. ಹೀಗಾಗಿ ಟೂರ್ನಿಯುದ್ದಕ್ಕೂ ಒನ್‌ಡೌನ್‌ನಲ್ಲಿ ಆಡಿದ ಇತರ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸ್ಟೀವನ್ ಸ್ಮಿತ್, ಅಂಬಟಿ ರಾಯುಡುರನ್ನು ಹಿಮ್ಮೆಟ್ಟಿಸಿದರು.

ಪಂದ್ಯ: 7, ರನ್: 288, ಸರಾಸರಿ: 41.14, 50: 3, ಸಿಕ್ಸರ್: 23.

4. ಮನೀಷ್ ಪಾಂಡೆ

ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಭರವಸೆಯ ಬ್ಯಾಟ್ಸ್‌ಮನ್ ಆಗಿ ಕನ್ನಡಿಗ ಮನೀಷ್ ಪಾಂಡೆ ಆಯ್ಕೆಯಾಗಿದ್ದಾರೆ. ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಈ ಸ್ಥಾನದ ಸ್ಪರ್ಧೆಯಲ್ಲಿದ್ದರೂ, ಅಸ್ಥಿರ ನಿರ್ವಹಣೆ ಹಿನ್ನಡೆಯಾಗಿದೆ.

ಪಂದ್ಯ: 16, ರನ್: 425, ಸರಾಸರಿ: 32.69, 50: 3, ಕ್ಯಾಚ್: 7

5. ಕೇನ್ ವಿಲಿಯಮ್ಸನ್

ಸನ್‌ರೈಸರ್ಸ್‌ ತಂಡದ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಿದ್ದ ಕಿವೀಸ್ ನಾಯಕ ಕೇನ್, ಕೂಡ ಭರವಸೆ ಇಡಬಹುದಾದ ಬ್ಯಾಟ್ಸ್‌ಮನ್. ನಿಕೋಲಸ್ ಪೂರನ್, ಎಬಿ ಡಿವಿಲಿಯರ್ಸ್‌, ಇವೊಯಿನ್ ಮಾರ್ಗನ್, ಜೋಸ್ ಬಟ್ಲರ್ ಸ್ಪರ್ಧೆಯಲ್ಲಿದ್ದರೂ, ಟೂರ್ನಿಯಲ್ಲಿ ಸ್ಥಿರ ನಿರ್ವಹಣೆ ತೋರದೆ ಹಿನ್ನಡೆ ಕಂಡರು.

ಪಂದ್ಯ: 12, ರನ್: 317, ಸರಾಸರಿ: 45.28, 50: 3, ಕ್ಯಾಚ್: 6

6. ಇಶಾನ್ ಕಿಶನ್

500ಕ್ಕೂ ಅಧಿಕ ರನ್ ಮಾತ್ರವಲ್ಲದೆ ಟೂರ್ನಿಯಲ್ಲಿ ಸರ್ವಾಧಿಕ 30 ಸಿಕ್ಸರ್ ಸಿಡಿಸಿದ ಇಶಾನ್ ಕಿಶನ್, ಸ್ಲಾಗ್ ಓವರ್‌ಗಳಲ್ಲಿ ಮುಂಬೈ ತಂಡಕ್ಕೆ ರನ್‌ಪ್ರವಾಹ ಹರಿಸುವಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗಾಗಿ ಕನಸಿನ ತಂಡದಲ್ಲೂ ಡೆತ್ ಓವರ್‌ಗೆ ಇವರೇ ಸೂಕ್ತ ಬ್ಯಾಟ್ಸ್‌ಮನ್.

ಪಂದ್ಯ: 14, ರನ್: 516, ಸರಾಸರಿ: 57.33, 50: 4, ಸಿಕ್ಸರ್: 30.

7. ಜೋಫ್ರಾ ಆರ್ಚರ್

ರಾಜಸ್ಥಾನ ರಾಯಲ್ಸ್ ತಂಡ ಕೊನೇ ಸ್ಥಾನ ಪಡೆದರೂ, ಜೋಫ್ರಾ ಆರ್ಚರ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿ ಅಚ್ಚರಿ ಮೂಡಿಸಿದರು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಅವರ ಉಪಯುಕ್ತ ಆಟವೇ ಇದಕ್ಕೆ ಕಾರಣ.

ಪಂದ್ಯ: 14, ರನ್: 113, ಸಿಕ್ಸರ್: 10, ವಿಕೆಟ್: 20, ಕ್ಯಾಚ್: 5.

8. ವರುಣ್ ಚಕ್ರವರ್ತಿ

ಟೂರ್ನಿಯಲ್ಲಿ 5 ವಿಕೆಟ್ ಗೊಂಚಲು ಪಡೆದ ಏಕಮಾತ್ರ ಬೌಲರ್. ರಾಹುಲ್ ಚಹರ್, ರವಿ ಬಿಷ್ಣೋಯಿಯಿಂದ ಸ್ಪರ್ಧೆ ಎದುರಿಸಿದರೂ, ರನ್ ನಿಯಂತ್ರಣ ಮತ್ತು ವಿಕೆಟ್ ಕಬಳಿಸುವ ಸಾಮರ್ಥ್ಯದಿಂದ ಮಿಸ್ಟರಿ ಸ್ಪಿನ್ನರ್ ಚಕ್ರವರ್ತಿ ಉತ್ತಮ ಆಯ್ಕೆ ಎನಿಸಿದ್ದಾರೆ.

ಪಂದ್ಯ: 13, ವಿಕೆಟ್: 17, 5 ವಿಕೆಟ್: 1, ಎಕಾನಮಿ: 6.84.

9. ಕಗಿಸೊ ರಬಾಡ

ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಕಗಿಸೊ ರಬಾಡ ಹೊಸ ಚೆಂಡು ಮತ್ತು ಡೆತ್ ಓವರ್ ಬೌಲಿಂಗ್‌ನಲ್ಲಿ ಅಪಾಯಕಾರಿ. ಟ್ರೆಂಟ್ ಬೌಲ್ಟ್, ಆನ್ರಿಚ್ ನೋರ್ಜೆ ಸವಾಲನ್ನು ಹಿಮ್ಮೆಟ್ಟಿಸಿ ಸ್ಥಾನ ಸಂಪಾದಿಸಿದ್ದಾರೆ.

ಪಂದ್ಯ: 17, ವಿಕೆಟ್: 30, ಸರಾಸರಿ: 18.26, 4 ವಿಕೆಟ್: 2.

10. ಯಜುವೇಂದ್ರ ಚಾಹಲ್

ಟೂರ್ನಿಯಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರದಿದ್ದರೂ, ಪ್ರತಿ ಪಂದ್ಯಕ್ಕೂ ಒಂದೆರಡು ವಿಕೆಟ್ ಕಬಳಿಸಿ ಸ್ಥಿರ ನಿರ್ವಹಣೆ ತೋರಿದ್ದಾರೆ. ರಶೀದ್ ಖಾನ್ ಸ್ಪರ್ಧೆಯಲ್ಲಿದ್ದರೂ, ವಿದೇಶಿ ಕೋಟಾದಿಂದ ಹಿನ್ನಡೆ ಕಂಡಿದ್ದಾರೆ.

ಪಂದ್ಯ: 15, ವಿಕೆಟ್: 21, ಸರಾಸರಿ: 19.28, ಎಕಾನಮಿ: 7.08.

11. ಜಸ್‌ಪ್ರೀತ್ ಬುಮ್ರಾ

ಆರಂಭಿಕ ಕೆಲ ಪಂದ್ಯಗಳಲ್ಲಿ ಪರಿಣಾಮಕಾರಿ ಎನಿಸದಿದ್ದರೂ, ಕೊನೇ ಹಂತದ ಪಂದ್ಯಗಳಲ್ಲಿ ಉತ್ತಮ ಲಯದಲ್ಲಿದ್ದರು. ಟಿ. ನಟರಾಜನ್, ಮೊಹಮದ್ ಶಮಿ, ದೀಪಕ್ ಚಹರ್ ಸ್ಪರ್ಧೆಯನ್ನು ಬುಮ್ರಾ ಹಿಮ್ಮೆಟ್ಟಿಸಿದ್ದಾರೆ.

ಪಂದ್ಯ: 15, ವಿಕೆಟ್: 27, ಸರಾಸರಿ: 14.96, ಎಕಾನಮಿ: 6.73, 4 ವಿಕೆಟ್: 2.

12. ಸ್ಯಾಮ್ ಕರ‌್ರನ್

ಹಲವು ಪಂದ್ಯಗಳಲ್ಲಿ ಸಿಎಸ್‌ಕೆ ತಂಡದ ಮಾನ ಕಾಪಾಡಿದ್ದ ಆಲ್ರೌಂಡರ್ ಸ್ಯಾಮ್ ಕರ‌್ರನ್ ಕನಸಿನ ತಂಡಕ್ಕೆ 12ನೇ ಆಟಗಾರರಾಗಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್-ಬೌಲಿಂಗ್ ಮಾಡಬಲ್ಲ ಸಾಮರ್ಥ್ಯದ ಕರ‌್ರನ್, ಸ್ಟೋಯಿನಿಸ್, ಕ್ರಿಸ್ ಮಾರಿಸ್ ಸ್ಪರ್ಧೆ ಬದಿಗೊತ್ತಿದ್ದಾರೆ.

ಪಂದ್ಯ: 14, ರನ್: 186, ಸಿಕ್ಸರ್: 12, 50: 1, ವಿಕೆಟ್: 23, 4 ವಿಕೆಟ್: 1.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net