ಸಂತೆಯೊಳಗಿನ ಸಂತ ಶಿವಕುಮಾರ ಶಿವಾಚಾರ್ಯರು; ಬಿ.ಎಲ್.ಶಂಕರ್ ಬಣ್ಣನೆ

ಸಿರಿಗೆರೆ ಹಿರಿಯ ಜಗದ್ಗುರುಗಳ 35ನೇ ಸಂಸ್ಮರಣೆ
Former ministers B.L. Shankar, H.K. Patil, and B.C. Patil, along with Dr. Siddayya (former Secretary of the Taralabalu Education Institution) and others, participated in the 35th commemoration ceremony of the late Taralabalu Senior Jagadguru Sri Shivakumara Shivacharya Swamiji.
ತರಳಬಾಳು ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 35ನೇ ಸಂಸ್ಮರಣೆಯಲ್ಲಿ ಮಾಜಿ ಸಚಿವರಾದ ಬಿ.ಎಲ್. ಶಂಕರ್, ಹೆಚ್.ಕೆ. ಪಾಟೀಲ್, ಬಿ.ಸಿ. ಪಾಟೀಲ್, ತರಬಾಳು ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ ಡಾ.ಸಿದ್ದಯ್ಯ ಮತ್ತಿತರರು ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ಧರ್ಮ, ರಾಜಕಾರಣ ಮತ್ತು ಶಿಕ್ಷಣಗಳು ತಮ್ಮ ಮೂಲ ಉದ್ದೇಶಕ್ಕೆ ಬದಲಾಗಿ ಹಣ ಗಳಿಕೆಯ ಸಾಧನವಾಗಿ ಇಂದು ನೂರಕ್ಕೆ ತೊಂಬತ್ತರಷ್ಟು ವ್ಯಾಪಾರೀಕರಣವಾಗಿರುವ ಸಂದರ್ಭದಲ್ಲಿ ಸಿರಿಗೆರೆಯ ತರಳಬಾಳು ಪೀಠದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಸಂತೆಯೊಳಗಿನ ಸಂತನಂತೆ ಕೆಲಸ ಮಾಡಿದವರು ಎಂದು ಮಾಜಿ ಸಚಿವ ಬಿ.ಎಲ್. ಶಂಕರ್ ಹೇಳಿದರು.

ಅರಮನೆ ಮೈದಾನದ ಚಾಮರವಜ್ರದಲ್ಲಿ ನಡೆದ ಪೂಜ್ಯರ 35ನೆಯ ಸಂಸ್ಮರಣಾ ದಿನದಲ್ಲಿ ಮಾತನಾಡಿದ ಅವರು, ಕುವೆಂಪು ಅವರ ವಿಚಾರಕ್ರಾಂತಿಗೆ ಆಹ್ವಾನ ಕೃತಿಗೂ ಶಿವಕುಮಾರ ಶಿವಾಚಾರ್ಯರ ಸಂಕಲ್ಪ ಪುಸ್ತಕಕ್ಕೂ ಬಹು ಸಾಮತ್ಯೆಗಳಿವೆ. ಪದ ಪ್ರಯೋಗಗಳ ಹೊರತಾಗಿ ಈರ್ವರ ಭಾವವೂ ಒಂದೇ ಆಗಿತ್ತು. ಬಸವಣ್ಣನವರ ತತ್ತ್ವಗಳನ್ನು ಪ್ರವಚನದಲ್ಲಿ ಹೇಳಿ ಲೌಕಿಕ ಪ್ರಪಂಚದಲ್ಲಿ ಮುಳುಗಿ ಹೋಗಿರುವ ಸ್ವಾಮಿಗಳು, ರಾಜಕಾರಣಿಗಳೇ ಹೆಚ್ಚಾಗಿರುವ ನಡುವೆ, ಸಂಪರ್ಕ ವ್ಯವಸ್ಥೆಯೇ ಇಲ್ಲದ ಹಳ್ಳಿಗಳಲ್ಲಿ ಶಾಲೆಗಳನ್ನು ಆರಂಭಿಸಿದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಮಧ್ಯ ಕರ್ನಾಟಕದಲ್ಲಿ ಅಕ್ಷರ ಕ್ರಾಂತಿಯನ್ನು ಆರಂಭ ಮಾಡಿ ಗ್ರಾಮಾಂತರ ಪ್ರದೇಶಗಳ ಲಕ್ಷಾಂತರ ಜನ ಇಂದು ಬದುಕು ಕಟ್ಟಿಕೊಳ್ಳಲು ಕಾರಣಕರ್ತರಾಗಿರುವುದು ಮರೆಯಲಾಗದು.

ಕಾವಿ - ಖಾದಿಗಳು ತಮ್ಮ ಮೂಲತೆಯನ್ನು ಮರೆಯುತ್ತಿರುವ ದಿನಗಳಲ್ಲಿ ಶಿವಕುಮಾರ ಶಿವಾಚಾರ್ಯರ ಸಂಸ್ಮರಣೆಯನ್ನು ಪರಿಸರ ಸಂರಕ್ಷಣೆ, ಶಿಕ್ಷಣ ಮತ್ತು ಆರೋಗ್ಯದ ಕುರಿತಾಗಿ ದುಂಡುಮೇಜಿನ ಸಭೆಗಳನ್ನು ನಡೆಸುವುದರ ಮೂಲಕ ಸ್ಮರಿಸಬೇಕೆಂದು ಬಿ.ಎಲ್.ಶಂಕರ್ ಸಲಹೆ ನೀಡಿದರು.

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ. ಡಾ. ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ ಹೋರಾಟ ಘೋಷಣೆಗಳನ್ನು ನೈಜವಾಗಿ ಅನುಷ್ಠಾನ ಮಾಡಿ ಒಂದು ಅಸ್ಪೃಶ್ಯ ಸಮಾಜವನ್ನು ಸ್ವಾಭಿಮಾನಿ ಸಮೃದ್ಧ ಸಮಾಜವನ್ನಾಗಿ ರೂಪಿಸಿದ ಕೀರ್ತಿ ಪೂಜ್ಯ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳಿಗೆ ಸಲ್ಲುತ್ತದೆ. ಬಸವಣ್ಣನವರ ವಿಚಾರಗಳನ್ನು ಜನಮನಕ್ಕೆ ತಲುಪಿಸಲು ಪ್ರಯತ್ನಿಸಿದ ಪೂಜ್ಯರ ಕಾರ್ಯ ಮರೆಯುವಂತದ್ದಲ್ಲ ಎಂದರು.

ವಚನಜ್ಯೋತಿ ಬಳಗದ ಪಿನಾಕಪಾಣಿ, ಸಿದ್ದರಾಮ ಕೇಶಾಪುರ ತಂಡದವರು ವಚನ ಸಂಗೀತವನ್ನು ನಡೆಸಿಕೊಟ್ಟರು. ತರಳಬಾಳು ವಿದ್ಯಾಸಂಸ್ಥೆಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಡಾ. ಸಿದ್ದಯ್ಯ ಮಾಜಿ ಸಚಿವ ಬಿ.ಸಿ. ಪಾಟೀಲ್, ಶಿಕ್ಷಣ ತಜ್ಞ ಡಾ. ಸಿದ್ದಪ್ಪ, ಹಿರಿಯರಾದ ಕೊಂಡಜ್ಜಿ ಬಸಪ್ಪ, ನಿವೃತ್ತ ಪೋಲೀಸ್ ಅಧಿಕಾರಿ ಡಾ. ಡಿ.ಸಿ. ರಾಜಪ್ಪ, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net