ಮನೆಯಲ್ಲಿ ಅಡ್ಡಾದಿಡ್ಡಿ ಚಪ್ಪಲಿ, ಶೂಗಳನ್ನು ಬಿಟ್ಟರೆ ನಿಜಕ್ಕೂ ಅಶುಭನಾ? ಈ ನಂಬಿಕೆಗಳ ಉದ್ದೇಶವೇನು? ಇಲ್ಲಿದೆ ಉತ್ತರ

vastu facts
ಮನೆಯಲ್ಲಿ ಅಡ್ಡಾದಿಡ್ಡಿ ಚಪ್ಪಲಿ, ಶೂಗಳನ್ನು ಬಿಟ್ಟರೆ ನಿಜಕ್ಕೂ ಅಶುಭನಾ? ಈ ನಂಬಿಕೆಗಳ ಉದ್ದೇಶವೇನು? ಇಲ್ಲಿದೆ ಉತ್ತರ
Published on: 

Vastu Facts: ಮನೆಯ ಸ್ವಚ್ಛತೆ ಮತ್ತು ವಸ್ತುಗಳನ್ನು ಜೋಡಿಸಿಡುವ ಕ್ರಮಕ್ಕೆ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವ ನೀಡಲಾಗಿದೆ ಎಂಬ ಸಂಗತಿ ಬಹುತೇಕರಿಗೆ ಗೊತ್ತಿದೆ. ಇಂದಿಗೂ ಇಂತಹ ವಿಚಾರಗಳನ್ನು ನಮ್ಮ-ನಿಮ್ಮ ಮನೆಗಳಲ್ಲಿ ತಪ್ಪದೇ ಪಾಲಿಸುತ್ತಾರೆ. ಸಂಜೆ ಬಳಿಕ ಕಸ ಗುಡಿಸಬಾರದು, ಮನೆಯೊಳಗೆ ಉಗುರು ಕತ್ತರಿಸಬಾರದು, ದಾರಿ ಮಧ್ಯೆ ಬೆಕ್ಕು ಸಿಗಬಾರದು, ಸಿಕ್ಕಿದರೆ 5-10 ನಿಮಿಷ ಬಿಟ್ಟು ಹೋಗಬೇಕು ಎಂಬೆಲ್ಲ ನಂಬಿಕೆಗಳು ಹಲವರಲ್ಲಿ ತಪ್ಪದೇ ಪಾಲನೆ ಆಗುತ್ತಿದೆ.

ಅದೇ ರೀತಿ, ನಾವು ಪ್ರತಿದಿನ ಬಳಸುವ ಪಾದರಕ್ಷೆಗಳನ್ನು ಮನೆಯಲ್ಲಿ ಅಡ್ಡಾದಿಡ್ಡಿ ಬಿಡುವುದು ಅಥವಾ ಕೆಲವು ಬೇಡದ ದಿಕ್ಕುಗಳಲ್ಲಿ ಇಡುವುದು ಸರಿಯಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಚಪ್ಪಲಿ, ಶೂಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸರಿಯಾದ ಜಾಗದಲ್ಲಿ ಇಡುವುದರಿಂದ ಮನೆಯ ಅಂದ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬಹುದು ಎಂಬುದರ ಜತೆಗೆ, ವಾಸ್ತು ನಂಬಿಕೆಗಳಲ್ಲಿ ಈ ಬಗ್ಗೆ ಏನಿದೆ ಎಂಬುದನ್ನೂ ನಾವಿಲ್ಲಿ ತಿಳಿಯೋಣ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವನ್ನೂ ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದಕ್ಕೆ ಮಹತ್ವವಿದೆ. ನಾವು ಪ್ರತಿದಿನ ಬಳಸುವ ಚಪ್ಪಲಿ ಮತ್ತು ಶೂಗಳನ್ನೂ ಎಲ್ಲೆಂದರಲ್ಲಿ ಬಿಡಬಾರದು ಎಂಬ ನಂಬಿಕೆಯಿದೆ. ಹಾಗಾದರೆ ಪಾದರಕ್ಷೆಗಳನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು? ಯಾವ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಬೇಕು? ಬಿಟ್ಟರೆ ಏನಾಗುತ್ತೆ? ಎಂಬ ಪ್ರಶ್ನೆಗೆ ಹೀಗಿದೆ ಉತ್ತರ.

ಯಾವ ದಿಕ್ಕಿನಲ್ಲಿ ಇಡಬೇಕು?

ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಚಪ್ಪಲಿ ಮತ್ತು ಶೂಗಳನ್ನು ತಲೆಕೆಳಗಾಗಿ ಇಡಬಾರದು. ಹೀಗೆ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ, ಸುಖ-ಶಾಂತಿಗೆ ಧಕ್ಕೆಯಾಗುತ್ತದೆ ಎಂದು ಹೇಳಲಾಗುತ್ತದೆ. ಪಾದರಕ್ಷೆಗಳನ್ನು ಮನೆಯ ತುಂಬಾ ಹರಡಿಕೊಂಡಂತೆ ಇಡುವುದನ್ನೂ ಅಶುಭವೆಂದು ಪರಿಗಣಿಸಲಾಗಿದೆ.

ಉತ್ತರ-ಪೂರ್ವ ದಿಕ್ಕಿನಲ್ಲಿ ಇಡಬೇಡಿ

ವಾಸ್ತು ಪ್ರಕಾರ, ಪಾದರಕ್ಷೆಗಳನ್ನು ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಬೇಕು ಎನ್ನಲಾಗಿದೆ. ಈ ದಿಕ್ಕುಗಳು ಲಕ್ಷ್ಮಿ ದೇವಿಗೆ ಸಂಬಂಧಿಸಿವೆ ಎಂಬ ನಂಬಿಕೆಯಿದ್ದು, ಇಲ್ಲಿ ಚಪ್ಪಲಿ, ಶೂಗಳನ್ನು ಇಡುವುದು ಶುಭವಲ್ಲ ಎಂದು ಹೇಳಲಾಗುತ್ತದೆ.

Also Read
ಕ್ಷಣಾರ್ಧದಲ್ಲಿ ಜನರ ಎದುರೇ ಬದಲಾಗುತ್ತೆ ಮುಖದ ಬಣ್ಣ, ಭಾವನೆ! ಚೀನಾದ 300 ವರ್ಷಗಳ ಕಲೆ ಬಗ್ಗೆ ಇಲ್ಲಿದೆ ರೋಚಕ ಮಾಹಿತಿ
vastu facts

ದಕ್ಷಿಣ-ಪಶ್ಚಿಮ ದಿಕ್ಕು ಸೂಕ್ತ

ಪಾದರಕ್ಷೆಗಳನ್ನು ಇಡಲು ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕು ಸೂಕ್ತವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಸಾಧ್ಯವಾದರೆ ಶೂ ರಾಕ್​ನಲ್ಲಿ ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಬೇಕು. ಮನೆಯ ಮುಖ್ಯ ಬಾಗಿಲಿನ ಎದುರು ಅಥವಾ ಪ್ರವೇಶದ್ವಾರದಲ್ಲಿ ಚಪ್ಪಲಿ, ಶೂಗಳನ್ನು ರಾಶಿ ಹಾಕಬಾರದು. ಇದರಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮತ್ತು ಕಲಹಗಳು ಉಂಟಾಗಬಹುದು ಎಂಬ ನಂಬಿಕೆಯೂ ಇದೆ.

ಒಟ್ಟಿನಲ್ಲಿ, ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ ಪಾದರಕ್ಷೆಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ, ಅಚ್ಚುಕಟ್ಟಾಗಿ ಇಡುವುದು ಉತ್ತಮ. ಮನೆಯ ಸ್ವಚ್ಛತೆ ಮತ್ತು ಶಿಸ್ತಿನ ದೃಷ್ಟಿಯಿಂದಲೂ ಈ ಅಭ್ಯಾಸ ಉಪಯುಕ್ತ ಎನ್ನಲಾಗಿದೆ. ಮತ್ತು ಕೆಲವರಲ್ಲಿ ಇದರ ಬಗ್ಗೆ ಆಳವಾದ ನಂಬಿಕೆಯೂ ಇದೆ. ಇದು ಅವರವರ ನಂಬಿಕೆಗಷ್ಟೇ. ಇಂತಹ ಪರಿಣಾಮಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನೂ ನಾವಿಲ್ಲಿ ಅರ್ಥೈಸಿಕೊಳ್ಳಬೇಕು,(ಏಜೆನ್ಸೀಸ್).