ಸಂಪಾದಕೀಯ | ಆಂತರಿಕ ಭದ್ರತೆ ಹೆಚ್ಚಲಿ

ಸಂಪಾದಕೀಯ | ಆಂತರಿಕ ಭದ್ರತೆ ಹೆಚ್ಚಲಿ
Published on: 

ಬೆಂಗಳೂರಿನ ಪುಲಿಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಅಕ್ಟೋಬರ್ 20ರಂದು ಸಂಭವಿಸಿದ ನಿಗೂಢ ಸ್ಫೋಟ ಹಾಗೂ ಅದರ ಬೆನ್ನಲ್ಲೇ ಹೊರಬರುತ್ತಿರುವ ಉಗ್ರ ಸಂಚಿನ ಅನುಮಾನಗಳು ಆತಂಕಕಾರಿಯಾಗಿವೆ. ವಿಜಯದಶಮಿಯಂತಹ ಜನದಟ್ಟಣೆಯ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸುಧಾರಿತ ಸ್ಪೋಟಕ ಸಾಧನ (ಐಇಡಿ) ಸಿಡಿಸಲು ದುಷ್ಕರ್ವಿುಗಳು ಹೊಂಚು ಹಾಕಿದ್ದರು ಎಂಬ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಬಲವಾದ ಶಂಕೆ, ರಾಜ್ಯದ ರಾಜಧಾನಿ ಮತ್ತೊಮ್ಮೆ ದೇಶವಿರೋಧಿ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಆಕಸ್ಮಿಕವಾಗಿ ಈ ಸ್ಫೋಟ ಸಂಭವಿಸದಿದ್ದರೆ ಈ ವಿಧ್ವಂಸಕ ಸಂಚು ಬಯಲಿಗೇ ಬರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಆಂತರಿಕ ಭದ್ರತೆ ಮತ್ತು ಗುಪ್ತಚರ ವ್ಯವಸ್ಥೆ ದುರ್ಬಲವಾಗಿದೆ. ಕಾಲಕಾಲಕ್ಕೆ ಎದುರಾಗುವ ಇಂತಹ ಬೆದರಿಕೆಗಳು ಕೇವಲ ಒಂದು ನಗರ ಅಥವಾ ರಾಜ್ಯದ ಕಾನೂನು-ಸುವ್ಯವಸ್ಥೆಯ ವಿಷಯವಲ್ಲ; ಇಡೀ ದೇಶದ ಆಂತರಿಕ ಭದ್ರತೆಯ ಸನ್ನದ್ಧತೆಗೆ ಒಡ್ಡುತ್ತಿರುವ ಬಹುದೊಡ್ಡ ಸವಾಲು. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಹೂಡಿಕೆಯ ಪ್ರಮುಖ ಕೇಂದ್ರವಾಗಿರುವ ಬೆಂಗಳೂರಿನಂತಹ ಮಹಾನಗರಗಳಲ್ಲಿ ಇಂತಹ ಕೃತ್ಯಗಳು ಸಾರ್ವಜನಿಕರಲ್ಲಿ ತೀವ್ರ ಭೀತಿ ಹುಟ್ಟಿಸುವುದಷ್ಟೇ ಅಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿರತೆಯ ಮೇಲೂ ದುಷ್ಪರಿಣಾಮ ಬೀರುತ್ತವೆ. ಜನಸಂದಣಿ ಇರುವ ಮಾರುಕಟ್ಟೆಗಳು, ಮಾಲ್ಗಳು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ದುಷ್ಕರ್ವಿುಗಳಿಗೆ ಸುಲಭ ಗುರಿಗಳಾಗುತ್ತವೆ.

ಸುದೈವವಶಾತ್ ಸಂಭಾವ್ಯ ಭಾರಿ ಅನಾಹುತವೊಂದು ತಪ್ಪಿದೆಯಾದರೂ, ಇದು ಎಚ್ಚರಿಕೆಯ ಗಂಟೆಯಾಗಬೇಕು. ಇಂದಿನ ಭಯೋತ್ಪಾದನಾ ಜಾಲಗಳು ತಮ್ಮ ಕಾರ್ಯತಂತ್ರವನ್ನು ಆಮೂಲಾಗ್ರವಾಗಿ ಬದಲಾಯಿಸಿಕೊಂಡಿವೆ. ಸ್ಲೀಪರ್ ಸೆಲ್ಗಳ ನೆರವು, ಸಾಮಾಜಿಕ ಜಾಲತಾಣಗಳ ಮೂಲಕ ಯುವಜನರ ದಿಕ್ಕುತಪ್ಪಿಸುವಿಕೆ ಹಾಗೂ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಕಚ್ಚಾ ವಸ್ತುಗಳನ್ನು ಬಳಸಿ ಸ್ಥಳೀಯವಾಗಿಯೇ ಐಇಡಿ ತಯಾರಿಸುವ ತಂತ್ರಗಳು ಭದ್ರತಾ ಸಂಸ್ಥೆಗಳಿಗೆ ಹೊಸ ಸವಾಲನ್ನು ಒಡ್ಡಿವೆ. ಆದ್ದರಿಂದ, ಸಾಂಪ್ರದಾಯಿಕ ಪೊಲೀಸ್ ಗಸ್ತು ವ್ಯವಸ್ಥೆಯಷ್ಟೇ ಸಾಲದು. ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕಣ್ಗಾವಲು, ಡಿಜಿಟಲ್ ನಿಗಾ ಹಾಗೂ ಗುಪ್ತಚರ ದಳಗಳ ಬಲವರ್ಧನೆ ಅತ್ಯಗತ್ಯವಾಗಿದೆ.ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳ ನಡುವೆ ನಿರಂತರ, ಸುಸಂಘಟಿತ ಮತ್ತು ಪಾರದರ್ಶಕ ಮಾಹಿತಿ ವಿನಿಮಯ ನಡೆಯಬೇಕಿದೆ.

ಯಾವುದೇ ಸಣ್ಣ ಸುಳಿವನ್ನು ಸಹ ಕಡೆಗಣಿಸದೆ ತಕ್ಷಣ ಕಾರ್ಯಾಚರಣೆ ನಡೆಸುವ ದಕ್ಷ ವ್ಯವಸ್ಥೆ ರೂಪುಗೊಳ್ಳಬೇಕು. ಜೊತೆಗೆ, ನಗರದಲ್ಲಿ ನಡೆಯುವ ಕಟ್ಟಡ ನಿರ್ಮಾಣ ಸ್ಥಳಗಳು, ಬಾಡಿಗೆ ಮನೆಗಳು ಹಾಗೂ ಕೈಬಿಡಲಾದ ಖಾಲಿ ಆಸ್ತಿಗಳ ಮೇಲೆ ಸ್ಥಳೀಯ ಠಾಣಾ ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಭದ್ರತೆಯು ಕೇವಲ ಸರ್ಕಾರದ ಹೊಣೆಯಾಗದೆ, ನಾಗರಿಕರೂ ತಮ್ಮ ಸುತ್ತಮುತ್ತ ನಡೆಯುವ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಸಾಮಾಜಿಕ ಜಾಗೃತಿ ತೋರಬೇಕು. ಶಾಂತಿ ಮತ್ತು ಸುವ್ಯವಸ್ಥೆ ಯಾವುದೇ ಸಮಾಜದ ಪ್ರಗತಿಯ ಬೆನ್ನೆಲುಬು. ಬೆಂಗಳೂರಿನ ಈ ಘಟನೆ ನೀಡಿರುವ ಎಚ್ಚರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಆಂತರಿಕ ಭದ್ರತಾ ಜಾಲವನ್ನು ಅಭೇದ್ಯವಾಗಿಸುವ ದಿಟ್ಟ ಹೆಜ್ಜೆಯನ್ನು ತುರ್ತಾಗಿ ಇಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net