

ಬೆಂಗಳೂರು : ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಅಭಿವೃದ್ಧಿ, ಜೀರ್ಣೋದ್ಧಾರ, ನವನಿರ್ಮಾಣ ಹಾಗೂ ಪುನರ್‌ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಗಳ ಎಂಜಿನಿಯರ್‌ಗಳು ಮತ್ತು ಸಲಹೆಗಾರರಿಂದ ಅಂದಾಜುಪಟ್ಟಿ ತಯಾರಿಸಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಮಹತ್ವದ ಸೂಚನೆ ನೀಡಿದೆ.
ದೇವಾಲಯಗಳ ಕಾಮಗಾರಿಗಳಿಗೆ ಖಾಸಗಿ ಸಂಸ್ಥೆಗಳ ಎಂಜಿನಿಯರ್‌ಗಳು ಹಾಗೂ ಖಾಸಗಿ ಸಲಹೆಗಾರರಿಂದ ಅಂದಾಜುಪಟ್ಟಿಗಳನ್ನು ತಯಾರಿಸಿ ಸಲ್ಲಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಈ ರೀತಿ ಸಲ್ಲಿಕೆಯಾಗುತ್ತಿರುವ ಅಂದಾಜುಪಟ್ಟಿಗಳು ಲೋಕೋಪಯೋಗಿ ಇಲಾಖೆಯ ಪ್ರಚಲಿತ ದರಪಟ್ಟಿಯನ್ನು ಆಧರಿಸದೆ, ವಿವರವಾದ ಅಳತೆಪಟ್ಟಿ ಹಾಗೂ ದರ ವಿಶ್ಲೇಷಣೆ ಇಲ್ಲದೆ ಹೆಚ್ಚಿನ ದರದಲ್ಲಿ ತಯಾರಾಗುತ್ತಿರುವುದು ಕಂಡುಬಂದಿದೆ ಎಂದು ಇಲಾಖೆ ತಿಳಿಸಿದೆ.
ಇಂತಹ ಅಂದಾಜುಪಟ್ಟಿಗಳಿಂದ ಕಾಮಗಾರಿಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ, ಕಾಮಗಾರಿಗಳ ಅನುಷ್ಠಾನಕ್ಕೆ ಹೆಚ್ಚಿನ ಮೊತ್ತ ವ್ಯಯಿಸಬೇಕಾದ ಸನ್ನಿವೇಶ ನಿರ್ಮಾಣವಾಗುತ್ತಿದ್ದು, ಲೆಕ್ಕಪರಿಶೋಧನಾ ಆಕ್ಷೇಪಣೆಗಳಿಗೂ ಕಾರಣವಾಗುತ್ತಿದೆ ಎಂದು ಇಲಾಖೆ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.
ಸರ್ಕಾರಿ ಏಜೆನ್ಸಿ ಮೂಲಕ ಕಾಮಗಾರಿ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಾವಳಿ-2002ರ ನಿಯಮ 6ರಂತೆ ದೇವಾಲಯಗಳ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಅಥವಾ ಸರ್ಕಾರದ ಏಜೆನ್ಸಿ ಮೂಲಕ ಕಾರ್ಯಗತಗೊಳಿಸಬೇಕಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ದೇವಾಲಯಗಳ ವಿವಿಧ ಕಾಮಗಾರಿಗಳಿಗೆ ಅಂದಾಜುಪಟ್ಟಿ ತಯಾರಿಸುವಾಗ ಏಕರೂಪತೆ, ಪಾರದರ್ಶಕತೆ ಹಾಗೂ ಕಾಮಗಾರಿ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಇಲಾಖೆ ಸೂಚಿಸಿದೆ. ಹಾಗೂ ಇಲಾಖೆಯ ಪ್ರಾಚೀನ ಶಿಲಾಮಯ ದೇವಾಲಯಗಳ ಜೀರ್ಣೋದ್ಧಾರ ಮತ್ತಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಅಂದಾಜುಪಟ್ಟಿ ತಯಾರಿಸುವಾಗ ಕಡ್ಡಾಯವಾಗಿ ಪುರಾತತ್ವ ಇಲಾಖೆಯ ಸಹಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.
ಇನ್ನುಮುಂದೆ ಲೋಕೋಪಯೋಗಿ ಇಲಾಖೆ ಅಥವಾ ಸಂಬಂಧಪಟ್ಟ ತಾಂತ್ರಿಕ ಇಲಾಖೆಯಿಂದ ತಾಂತ್ರಿಕ ಪರಿಶೋಧನೆ ಮಾಡಿಸದೆ ಸಲ್ಲಿಸುವ ಅಂದಾಜುಪಟ್ಟಿಯನ್ನು ಅನುಮೋದನೆಗೆ ಪರಿಗಣಿಸದಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.