

ಕರ್ನಾಟಕದಲ್ಲಿ ಹೆಚ್ಚು ಕಡಿಮೆ ಜಿಲ್ಲೆಗೊಂದು ವಿಶ್ವವಿದ್ಯಾಲಯಗಳಿವೆ. ‘ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ರಾಯಚೂರು ವಿಶ್ವವಿದ್ಯಾಲಯ ಕಾರ್ಯಾರಂಭವಾಗಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದು ಸಂತೋಷದಾಯಕ. ಆದರೆ ಇದು ‘ನಾಮ್ಕೆವಾಸ್ತೆ’ ವಿಶ್ವವಿದ್ಯಾಲಯ ಆಗಬಾರದು.
ವಿವಿ ಸ್ಥಾಪನೆಯಾದರೆ ಹಿಂದುಳಿದ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಭವಿಷ್ಯದ ಅಗತ್ಯಗಳನ್ನು ಆಧರಿಸಿ 400-500 ಎಕರೆ ಪ್ರದೇಶದಲ್ಲಿ ವಿವಿ ನಿರ್ವಣವಾಗಬೇಕಾಗಿದೆ. ವಿವಿಗೆ ಅಗತ್ಯವಿರುವ ಸೌಲಭ್ಯಗಳು ಒದಗಿಸಬೇಕು. ಸೂಕ್ತ ಜ್ಞಾನಸಾಮರ್ಥ್ಯ ಹಾಗೂ ಸೃಜನಶೀಲತೆಗಳಿಂದ ವಿದ್ಯಾರ್ಥಿಗಳನ್ನು ಸಬಲಗೊಳಿಸಿ ಜಾಗತಿಕ ಸವಾಲುಗಳನ್ನು ಎದುರಿಸಲು ಅಣಿಗೊಳಿಸಬೇಕು. ನಾವೀನ್ಯತೆಯ ಕಲಿಸುವಿಕೆ-ಕಲಿಯುವಿಕೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಧ್ಯೇಯಗಳ ಸಾಧನೆಯಾಬೇಕು. ನಿರಂತರ ಅಭಿವೃದ್ಧಿಗಾಗಿ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳ ಸಮನ್ವಯ ಬಳಕೆಗೆ ಸಹಾಯ ನೀಡಬೇಕು.
ಮಾನವ ಹಕ್ಕುಗಳು, ಮೌಲ್ಯಾಧಾರಿತ ವ್ಯವಸ್ಥೆ, ಸಂಸ್ಕೃತಿ, ಪರಂಪರೆ, ಪರಿಸರ ಹಾಗೂ ವೈಜ್ಞಾನಿಕ ಮನೋಭಾವದ ಬಗ್ಗೆ ಜಾಗೃತಿ ಮೂಡಿಸಬೇಕು. ಈ ವಿಶ್ವವಿದ್ಯಾಲಯ ಪರಿಸರದ ಬಗ್ಗೆ ಅಧ್ಯಯನ ಕೈಗೊಳ್ಳುವ ಮುಖ್ಯ ಕೇಂದ್ರವಾಗಬೇಕು. ಕೆಲವು ಹೊಸ ಅಧ್ಯಯನ ವಿಷಯಗಳನ್ನು ದೇಶದಲ್ಲೇ ಪ್ರಥಮವಾಗಿ ಇಲ್ಲಿ ಆರಂಭಿಸಬೇಕು. ಆ ಮೂಲಕ ದೇಶದ ಶೈಕ್ಷಣಿಕ ಭೂಪಟದಲ್ಲಿ ಗೌರವದ ಸ್ಥಾನವನ್ನು ಸಂಪಾದಿಸಬೇಕು.
| ವಿಜಯ್ಕುಮಾರ್ ಎಚ್.ಕೆ. ರಾಯಚೂರು