

ಚುನಾವಣಾ ರ್ಯಾಲಿಗಳು, ಪ್ರಚಾರದ ಆರ್ಭಟ ಕರೊನಾ ಸೋಂಕಿನ ಪ್ರಸರಣ ಹೆಚ್ಚಿಸುವಲ್ಲಿ ಕಾರಣವಾಗಿ, ಪರಿಸ್ಥಿತಿ ಹೇಗೆ ವಿಷಮವಾಯಿತು ಎಂಬುದಕ್ಕೆ ದೇಶ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಈ ಪಂಚರಾಜ್ಯಗಳ ಚುನಾವಣೆ ಪ್ರಕ್ರಿಯೆ ವೇಳೆ ಸುರಕ್ಷಾ ಕ್ರಮಗಳು, ಕರೊನಾ ಸಂಬಂಧಿಸಿದ ನಿಯಮಗಳು ಸ್ಪಷ್ಟವಾಗಿ ಉಲ್ಲಂಘನೆಯಾದವು. ಪಶ್ಚಿಮ ಬಂಗಾಳದ ರ್ಯಾಲಿಗಳಲ್ಲಂತೂ ಸಾವಿರಾರು ಜನರು ವೈಯಕ್ತಿಕ ಅಂತರ ಕಾಪಾಡಿಕೊಳ್ಳದೆ, ಮುಖಗವಸು ಧರಿಸದೆ ಭಾಗವಹಿಸಿದ್ದರು. ಅದರ ಪರಿಣಾಮ ಸೋಂಕು ವೇಗವಾಗಿ ಹಬ್ಬಿದೆ, ಹಬ್ಬುತ್ತಿದೆ. ಕೆಲವೆಡೆಯಂತೂ ಪರಿಸ್ಥಿತಿ ನಿಯಂತ್ರಿಸಲಾಗದಷ್ಟು ಕೈಮೀರಿದೆ. ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ, ವೈದ್ಯ ಕೀಯ ಆಮ್ಲಜನಕ ದೊರೆಯದಂಥ ದಾರುಣ ಪರಿಸ್ಥಿತಿಯಿದೆ.
ರಾಜಕೀಯ ನಮ್ಮ ದೇಶದಲ್ಲಿ ಯಾವಾಗಲೂ ಚಾಲ್ತಿಯಲ್ಲಿರುವ ವಿದ್ಯಮಾನ. ಚುನಾವಣೆ ಬಂದಾಗಲಂತೂ ರಾಜಕೀಯ ಚಟುವಟಿಕೆಗಳು ತಾರಕಕ್ಕೆ ಏರುತ್ತವೆ. ದೇಶದ ಎಲ್ಲ ಭಾಗಗಳಲ್ಲಿ ಸೋಂಕು ಪ್ರಕರಣಗಳು ಏರುಮುಖ ಕಾಣುತ್ತಲೇ ಇದ್ದವು. ಇದು ಗೊತ್ತಿದ್ದರೂ, ‘ದೇಶದಲ್ಲಿ ಕರೊನಾ ಇಲ್ಲವೇ ಇಲ್ಲ’ ಎಂಬಂತೆ ರಾಜಕೀಯ ರ್ಯಾಲಿಗಳು ನಡೆದದ್ದು ವಿಪರ್ಯಾಸ.
ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕೋವಿಡ್ ನಿಯಮ ಮೀರಿ ರ್ಯಾಲಿಗಳನ್ನು ನಡೆಸುತ್ತಿದ್ದರೂ ಕ್ರಮಕೈಗೊಳ್ಳದೆ ಮೌನವಾಗಿದ್ದ ಚುನಾವಣಾ ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.. ಆಯೋಗದ ಅಧಿಕಾರಿಗಳ ವಿರುದ್ಧ ಹತ್ಯೆಯ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿತು. ಮತ ಎಣಿಕೆ ಕೇಂದ್ರಗಳು ಜೀವಕ್ಕೆ ಆಪತ್ತು ತರುತ್ತವೆ ಎಂದಾದರೆ ಮತ ಎಣಿಕೆಯನ್ನೇ ತಡೆಹಿಡಿಯುವುದಾಗಿ ಎಚ್ಚರಿಕೆ ನೀಡಿದ್ದ ನ್ಯಾಯಪೀಠ, ಕೋವಿಡ್ ನಿಯಮ ಕಡ್ಡಾಯ ಪಾಲನೆ ಕುರಿತಂತೆ ಕೈಗೊಂಡಿರುವ ಕ್ರಮಗಳನ್ನು ಮುಂಚಿತವಾಗಿ ಮನವರಿಕೆ ಮಾಡಿಕೊಡುವಂತೆಯೂ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಚುನಾವಣಾ ಆಯೋಗ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೇ 2ರಂದು ಅಥವಾ ನಂತರದ ದಿನದಲ್ಲಿ ಗೆದ್ದ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿದೆ. ವಿಜೇತ ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಇಬ್ಬರು ವ್ಯಕ್ತಿಗಳ ಜತೆ ಬಂದು ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಪಡೆಯಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ. ಇಂಥ ಬಿಗಿ ಕ್ರಮದ ಅವಶ್ಯಕತೆ ಇತ್ತು. ಚುನಾವಣಾ ಆಯೋಗ ಇಂಥ ಕ್ರಮಕ್ಕೆ ಮುಂದಾಗುವ ಮುನ್ನವೇ ರಾಜಕೀಯ ಪಕ್ಷಗಳೇ ಎಚ್ಚೆತ್ತುಕೊಂಡಿದ್ದರೆ ಸಮಸ್ಯೆ ಈ ಪರಿ ಹೆಚ್ಚುತ್ತಿರಲಿಲ್ಲವೇನೋ.
ಅದೇನಿದ್ದರೂ ಪ್ರಚಾರ ಮತ್ತಿತರ ಸಂದರ್ಭಗಳಲ್ಲಿ ತೋರಿದ ನಿರ್ಲಕ್ಷ್ಯ ಮತಏಣಿಕೆ ಸಂದರ್ಭ ಹಾಗೂ ನಂತರದ ದಿನಗಳಲ್ಲಿ ಮರುಕಳಿಸಬಾರದು. ಗೆದ್ದ ಅಭ್ಯರ್ಥಿಗಳಿಗೆ ಉತ್ಸಾಹ ಇದ್ದೇ ಇರುತ್ತದೆ. ಆ ಉತ್ಸಾಹದ ಭರದಲ್ಲಿ ನಿಯಮಗಳು ಅಥವಾ ಸುರಕ್ಷಾ ಕ್ರಮಗಳ ಉಲ್ಲಂಘನೆ ಆಗಬಾರದು. ಈ ಬೆಳವಣಿಗೆಗಳು, ಹೈಕೋರ್ಟಿನ ನಿಲುವು, ಚುನಾವಣಾ ಆಯೋಗದ ಕ್ರಮದಿಂದಾದರೂ ರಾಜಕೀಯ ಪಕ್ಷಗಳು ಪಾಠ ಕಲಿಯಬೇಕು. ರಾಜಕೀಯ ನಾಯಕರೇ ಮಾದರಿಯಾಗಿ, ಮೇಲ್ಪಂಕ್ತಿ ಹಾಕಿಕೊಡಬೇಕೆ ಹೊರತು ತಪು್ಪಗಳ ಕಟಕಟೆಯಲ್ಲಿ ನಿಲ್ಲುವಂತಾಗಬಾರದು.