ಸಂಪಾದಕೀಯ: ಮರು ಆರಂಭದ ಪರ್ವ- ಸಹಜ ಸ್ಥಿತಿಗೆ ಮರಳುವ ಸಮಾಧಾನ

corona
Published on

ಕರೊನಾ ಮೂರನೇ ಅಲೆಯ ಅಪಾಯವಿದ್ದರೂ, ಸದ್ಯಕ್ಕೆ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13 ಸಾವಿರದ ಆಸುಪಾಸಿನಲ್ಲಿದೆ. ಹಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ಮಹತ್ವದ ಕ್ರಮಗಳನ್ನು ಘೋಷಿಸಿದ್ದು, ಹಲವು ನಿರ್ಬಂಧಗಳನ್ನು ಸಡಿಲಿಸಿದೆ. ಈ ಮೂಲಕ ಜನಜೀವನ ಮತ್ತಷ್ಟು ಸಾಮಾನ್ಯ ಸ್ಥಿತಿಗೆ ಮರಳಲು ಸಹಾಯವಾಗಲಿದೆ. ಮುಖ್ಯವಾಗಿ, 6ರಿಂದ 10ನೇ ತರಗತಿ ಶಾಲೆ, ಪಿಯು ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಹಾಜರಿಗೆ ಅನುಮತಿ ನೀಡಿದೆ.

ಕಳೆದ 18 ತಿಂಗಳುಗಳಿಂದ ತುಂಬ ಅಸ್ತವ್ಯಸ್ತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು ಹಳಿಗೆ ಮರಳಲು ಇದು ನೆರವಾಗಲಿದೆ. ಪರಿಣಾಮಕಾರಿ ಕಲಿಕೆಗೆ ಭೌತಿಕ ತರಗತಿಗಳೇ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವನ್ನು ಬಹುತೇಕ ವಿದ್ಯಾಥಿರ್ಗಳು ಮತ್ತು ಪಾಲಕರು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಪೂರ್ಣಪ್ರಮಾಣದ ಹಾಜರಾತಿಗೆ ಅವಕಾಶ ನೀಡಲಾಗಿದೆ. ಪಾಸಿಟಿವಿಟಿ ದರ ಶೇಕಡ 1ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ 1ರಿಂದ 5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ನಡೆಸುವ ಬಗ್ಗೆ ಗಂಭೀರ ಚಿಂತನೆ ನಡೆದಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಮುಂದಿನ ಸಭೆಯಲ್ಲಿ ಕೈಗೊಳ್ಳುವ ನಿರೀೆ ಇದೆ.

ಮತ್ತೊಂದು ಮಹತ್ವದ ನಿರ್ಧಾರ ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದ್ದು. ಶೇಕಡ 1ರೊಳಗೆ ಪಾಸಿಟಿವಿಟಿ ದರವಿರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿನ ಎಲ್ಲ ಸೀಟುಗಳ ಭತಿರ್ಗೆ ಸರ್ಕಾರ ಅಸ್ತು ಎಂದಿದೆ. ಆದರೆ ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಶೇ.50 ಸೀಟು ತುಂಬಲು, ಶೇ.2ಕ್ಕಿಂತ ಹೆಚ್ಚಾದರೆ ಟಾಕೀಸ್​ಗಳನ್ನು ಯಥಾರೀತಿ ಬಂದ್​ ಮಾಡಿಸಲು ನಿರ್ಧರಿಸಿದೆ. ದೊಡ್ಡಮೊತ್ತದ, ದೊಡ್ಡ ಬ್ಯಾನರಿನ ಚಿತ್ರಗಳು ಬಿಡುಗಡೆಗೆ ಕಾದಿದ್ದು, ಸದ್ಯದ ಸ್ಥಿತಿಯಲ್ಲಿ ಸೋಂಕು ಪ್ರಸರಣ ನಿಯಂತ್ರಣದಲ್ಲಿ ಇರುವುದರಿಂದ ಚಿತ್ರರಂಗದ ಚಟುವಟಿಕೆಗಳು ಮತ್ತೆ ಗರಿಗೆದರುವ ನಿರೀೆ ಇದೆ. ಆಥಿರ್ಕ ವಹಿವಾಟು, ಉದ್ಯಮಗಳ ಹಿತ, ಶೈಕ್ಷಣಿಕ ಚಟುವಟಿಕೆ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ದೀರ್ಕಾಲ ಮುಂದುವರಿಸುವುದು ಕಷ್ಟವೇ. ಸುರಕ್ಷತಾ ಕ್ರಮಗಳೊಂದಿಗೆ ಹಂತಹಂತವಾಗಿ ಹಲವು ವಲಯಗಳು ಪೂರ್ಣಪ್ರಮಾಣದ ಚಟುವಟಿಕೆಗಳಿಗೆ ಮರಳುವುದು ಅಗತ್ಯ. ಈಗಾಗಲೇ ಹಲವು ಉದ್ಯಮಗಳು ಭಾರಿ ನಷ್ಟದ ಜತೆಗೆ ಹಲವು ಬಗೆಯ ಸಂಕಷ್ಟ ಎದುರಿಸುತ್ತಿವೆ.

ಲಸಿಕೆ ಅಭಿಯಾನಕ್ಕೂ ಇನ್ನಷ್ಟು ವೇಗ ನೀಡಬೇಕಿದೆ. ಸಾಕಷ್ಟು ಅರಿವು, ಜಾಗೃತಿ ಮೂಡಿಸಿದರೂ ಕೆಲ ಜಿಲ್ಲೆಗಳಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಎರಡೂ ಡೋಸ್​ ಪಡೆದವರ ರೋಗನಿರೋಧಕ ಶಕ್ತಿ ಹೆಚ್ಚಿರುವುದು, ಪ್ರಯೋಗಗಳಿಂದ ಸ್ಪಷ್ಟಗೊಂಡಿದೆ. ಹೀಗಾಗಿ ಆರೋಗ್ಯ ಇಲಾಖೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಲಸಿಕೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಮುಂದುವರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net