ನಮ್ಮ ಭಾಷೆ-ಸಂಸ್ಕೃತಿ ಭಾರತಾಂಬೆಯ ಹಾರದಲ್ಲಿರುವ ಹೂವು

Column F
Published on
ಸಕಲ ಜೀವ ಸಂಪತ್ತುಗಳಲ್ಲಿ ಮಾನವ ಹೇಗೆ ವಿಶಿಷ್ಟವಾಗಿದ್ದಾನೋ ಹಾಗೆಯೇ ಅವನ ಭಾಷೆಯೂ ವೈಶಿಷ್ಟ್ಯವನ್ನು ಹೊಂದಿದೆ. ಇತರ ಪ್ರಾಣಿ, ಪಕ್ಷಿಗಳು ವಿವಿಧ ರೀತಿಯ ಶಬ್ದ, ಸನ್ನೆ, ಕೂಗು ಇತ್ಯಾದಿಗಳ ಮೂಲಕ ಸಂವಹನ ಮಾಡಿದರೆ, ಮಾನವ ವಿವಿಧ ಭಾಷೆಗಳನ್ನು ಬಳಸಿಕೊಂಡು ಮಾತನಾಡುವ ಮೂಲಕ ಸಂವಹನ ನಡೆಸುತ್ತಾನೆ. ವಿಶ್ವದಲ್ಲಿ ಸಾವಿರಾರು ಭಾಷೆಗಳಿವೆ. ನಮ್ಮ ದೇಶವನ್ನೇ ಪರಿಗಣಿಸಿದರೆ, ರಾಜ್ಯವಾರು, ಪರಿಸರಗಳಿಗೆ ಅನುಗುಣವಾಗಿ ಮಾತ್ರವಲ್ಲದೆ ವಿವಿಧ ಜಾತಿ, ಮತ, ಧರ್ಮ, ಪಂಥದವರೂ ವಿವಿಧ ರೀತಿಯ ಭಾಷೆಗಳನ್ನು ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ ಭಾರತವು ಸ್ವಾತಂತ್ರ್ಯ ಗಳಿಸಿದ ಮೇಲೆ ಸುಗಮ ಆಡಳಿತಕ್ಕಾಗಿ ಭಾಷಾವಾರು ರಾಜ್ಯಗಳನ್ನು ರಚಿಸಿಕೊಂಡಿತು. ಹೀಗೆ ಭಾಷೆಗೆ ಅನುಗುಣವಾಗಿ ರಾಜ್ಯವನ್ನು ವಿಂಗಡಿಸಿದಾಗ ದೇಶವೂ ವಿಂಗಡಣೆಯಾಗುವುದಿಲ್ಲವೇ ಎಂಬ ಅನಿಸಿಕೆಗಳು ಉದ್ಭವಿಸಿದ್ದಂತೂ ನಿಜ. ಆದರೆ ನಮ್ಮ ಭಾರತೀಯರೆಲ್ಲರ ಹೃದಯವೈಶಾಲ್ಯದಿಂದ ವಿವಿಧತೆಯಲ್ಲಿ ಏಕತೆಯನ್ನು ಹೊಂದಲು ಸಾಧ್ಯವಾಗಿದೆ.

ಈ ಭಾಷೆಗಳೆಲ್ಲ ಹೇಗಿವೆ ಎಂದರೆ ವಿವಿಧ ರೀತಿಯ ಸುಂದರಪುಷ್ಪಗಳನ್ನು ಪೋಣಿಸಿ ಒಂದು ದೊಡ್ಡ ಹೂವಿನಮಾಲೆ ಮಾಡಿ ತಾಯಿ ಭಾರತಮಾತೆಗೆ ತೊಡಿಸಿದಂತಿದೆ. ವಿವಿಧ ಭಾಷಾ-ಸಾಹಿತ್ಯಗಳ ಪುಷ್ಪಗಳ ಹಾರವನ್ನು ಧರಿಸುವ ಭಾರತಮಾತೆಯು ಅಮೂಲ್ಯವಾದ ಹೂಗಳ ಮಾಲೆಗಳನ್ನು ಧರಿಸಿರುವ ದೇವತೆಯೇ ಸರಿ. ಭಾಷೆಗಳು ಬೇರೆ-ಬೇರೆ ಹೂಗಳಂತೆ ಆದರೂ ಅವನ್ನು ಪೋಣಿಸಿ, ಸಂಘಟಿತರನ್ನಾಗಿಸಿರುವ ದಾರವು ‘ಭಾರತೀಯತೆ’ಯೇ ಆಗಿದೆ.

ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡಿದ ಎಲ್ಲ ಸಂದರ್ಭಗಳಲ್ಲಿ ಕೂಡ ಸಾಹಿತ್ಯವು ತನ್ನದೇ ಆದ ಪಾತ್ರವನ್ನು ವಹಿಸುತ್ತ ಬಂದಿದೆ. ಸಾಹಿತ್ಯವು ಸಂಘಟನೆಗೆ ಮುಖ್ಯ ಕಾರಣವಾಗಿದೆ. ಮಹಾತ್ಮ ಗಾಂಧೀಜಿಯವರ ಸಮಗ್ರ ಲೇಖನಗಳ ಸಂಗ್ರಹ ಕ್ಷೇತ್ರದ ‘ಸಂಸ್ಕೃತಿ ಮತ್ತು ಸಂಶೋಧನ ಪ್ರತಿಷ್ಠಾನ’ದಲ್ಲಿದೆ. 1929ರಿಂದ 1940ರವರೆಗೆ ಅವರು ಬರೆದ ಸಾಹಿತ್ಯ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಇವರಿಗೆ ನಮ್ಮ ದೇಶದ ಭವಿಷ್ಯದ ಬಗ್ಗೆ ಹೇಗೆ ಚಿಂತನೆ ಇತ್ತು, ನಮ್ಮ ಯುವಕರು ಹೇಗೆ ಮುಂದೆ ಬರಬೇಕು? ಅವರ ಅಪೇಕ್ಷೆಯೇನು? ಸಹಕಾರಿ ರಂಗ, ರಾಜಕೀಯ ರಂಗ ಹೇಗಿರಬೇಕು ಎಂದು ಎಲ್ಲವನ್ನೂ ಅವರು ವಿಶ್ಲೇಷಿಸಿದ್ದಾರೆ. ಅದರಲ್ಲಿ ಗಾಂಧೀಜಿ ಬರೆದಿದ್ದ ‘ಯುವಕರು ನಮ್ಮ ದೇಶದ ಸಂಪತ್ತು, ಯುವಕರು ಸಂಘಟಿತರಾದರೆ, ಪ್ರಜ್ಞಾವಂತರಾದರೆ, ಹೊಣೆಗಾರಿಕೆಯನ್ನು ಅರಿತರೆ ಈ ದೇಶಕ್ಕೆ ಉಜ್ವಲ ಭವಿಷ್ಯವಿದೆ’ ಎಂಬ ಸಂದೇಶ ಅರ್ಥಪೂರ್ಣ.

ಇತ್ತೀಚೆಗೆ ರಾಯಚೂರಿಗೆ ಹೋಗಿದ್ದಾಗ ಪತ್ರಕರ್ತರೊಬ್ಬರು, ‘ಯುವಕರನ್ನು ರಾಜಕೀಯ ಅಥವಾ ಸಾಮಾಜಿಕ ಚಿಂತನೆಗಳ ಬಗ್ಗೆ ಮಾತನಾಡಲು ಅಥವಾ ಅಂತಹ ಚರ್ಚೆಗಳಲ್ಲಿ ಪಾಲ್ಗೊಳ್ಳಲು, ಹೋರಾಟ ಮಾಡಲು ಬಿಡುವುದು ಸರಿಯೇ, ಅವರನ್ನು ಉಪಯೋಗಿಸಿಕೊಳ್ಳುವುದು ಸರಿಯೇ?’ ಎಂದು ನನ್ನಲ್ಲಿ ಪ್ರಶ್ನೆ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನಾನು ‘ನಿಮ್ಮ ಮಾತು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಯುವಕರು ದೇಶದ ಚಿಂತನೆಗೆ ಮುಂದೆ ಬರುತ್ತಿಲ್ಲ ಎನ್ನುವ ಮಾತಿದೆ, ದೇಶದ ಸಾಮಾಜಿಕ, ಆರ್ಥಿಕ ವ್ಯವಸ್ಥೆಗೆ, ಅನೇಕ ರಾಜಕೀಯ ವಿಷಯಗಳಿಗೆ ಅವರು ಸ್ಪಂದಿಸುವುದಿಲ್ಲ, ದೇಶದ ಸಮಗ್ರತೆ ಕುರಿತು ಅವರು ಚಿಂತಿಸುವುದಿಲ್ಲ ಎನ್ನುವ ದೂರಿದೆ. ನೀವು ವಿರುದ್ಧವಾದ ಪ್ರಶ್ನೆಯನ್ನು ಕೇಳುತ್ತಿದ್ದೀರಿ. ಯುವಕರನ್ನು ಉಪಯೋಗಿಸಿಕೊಳ್ಳುವುದು ಸರಿಯಲ್ಲ ಆದರೆ ದೇಶದ ಪ್ರಗತಿಪರ ಚಿಂತನೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯ ಅಗತ್ಯ ಬಹಳಷ್ಟಿದೆ’ ಎಂದೆ.

ವಿವಿಧ ವಿಚಾರಗಳನ್ನು ತಿಳಿಸಲು ಇರುವ ಸರಳಮಾರ್ಗವೆಂದರೆ ಸಾಹಿತ್ಯ. ಯುವಜನತೆಗೆ ಸಾಹಿತ್ಯದ ಮೇಲೆ ಆಸಕ್ತಿ ಕಡಿಮೆ ಎಂಬ ಭಾವನೆ ಒಪ್ಪತಕ್ಕದ್ದು. ಹಾಗಾಗಿ ದೇಶ ಕಟ್ಟುವ ಯುವಜನತೆಯನ್ನು ರೂಪಿಸುವ ಸಲುವಾಗಿ ಅವರಲ್ಲಿ ಸಾಹಿತ್ಯಾಸಕ್ತಿಯನ್ನು ಉಂಟು ಮಾಡಬೇಕಾದ ಅವಶ್ಯಕತೆಯಿದೆ. ಹಿರಿಯ ಸಾಹಿತಿಗಳು ಜನರಿಗೆ ಸಾಹಿತ್ಯವನ್ನು ಆತ್ಮೀಯವನ್ನಾಗಿಸುವಲ್ಲಿ ಶ್ರಮಿಸಬೇಕಾಗಿದೆ. ಸಾಹಿತ್ಯ ಎಂದರೆ ಆತ್ಮೀಯವಾದ ಚಿಂತನೆ ಮತ್ತು ವಿಚಾರಗಳು. ಸಾಹಿತ್ಯವನ್ನು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟು ಅದು ಕುತೂಹಲ ಮೂಡಿಸಿ, ಆಸಕ್ತಿಯನ್ನು ವೃದ್ಧಿಸಿಕೊಂಡು ಹೋಗುತ್ತದೆ. ಇನ್ನೂ ಉಜ್ವಲವಾದ ಚಿಂತನೆಗಳಿಗೆ ಅದು ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಸಾಹಿತ್ಯವನ್ನು ಓದಲು ಆಸಕ್ತಿಯನ್ನು ಹುಟ್ಟಿಸಬೇಕಿದೆ.

ಕರೊನಾ ಸಂದರ್ಭ ಜೀವನವು ಸಾಕಷ್ಟು ಕಷ್ಟದಾಯಕವಾದರೂ ಅನೇಕ ಜನರು ಸಾಹಿತ್ಯಪ್ರೀತಿಯನ್ನು ಬೆಳೆಸಿಕೊಂಡರು ಎಂಬುದಂತೂ ನಿಜ. ನಾನು ಕೂಡ ಬಹಳಷ್ಟು ಪುಸ್ತಕಗಳನ್ನು ಓದಿದೆ. ಅದರಲ್ಲಿ ಹೊನ್ನಾವರದ ಬಳಿಯಿದ್ದ ಚೆನ್ನಭೈರಾದೇವಿ ಎಂಬ ರಾಣಿಯ ಕುರಿತಾದ ಪುಸ್ತಕ ಓದಿದೆ. ಆಕೆಯ ಜೀವನ ಚರಿತ್ರೆ ಓದಿದ ಬಳಿಕ ಬಹಳಷ್ಟು ಚಿಂತನೆಗಳು ಹುಟ್ಟಿಕೊಂಡವು. ಚೆನ್ನಭೈರಾದೇವಿಯ ಚರಿತ್ರೆಯನ್ನು ಎಳೆಎಳೆಯಾಗಿ ವಿವರಿಸಿದ ಲೇಖಕರಾದ ಗಜಾನನ ಶರ್ಮರನ್ನು ಸಂರ್ಪಸಿ, ಅವರಲ್ಲಿ ಮುಖತಃ ಮಾತನಾಡಿದೆ. ಪುಸ್ತಕದ ಕುರಿತಾಗಿ ‘ಇದು ಹೇಗೆ ಕಲ್ಪನೆಗೆ ಬಂತು?’ ಎಂದು ಕೇಳಿದೆ. ಅದಕ್ಕವರು ‘ಕಲ್ಪನೆ ಎಂದಲ್ಲ. ಅನೇಕ ಮಂದಿ ಈ ದೇಶದ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಆಯಾ ಕಾಲದಲ್ಲಿ ಕಾಲಕ್ಕನುಗುಣವಾಗಿ ಜೀವನವನ್ನು ಸಮರ್ಪಿಸಿದ್ದಾರೆೆ. ಚೆನ್ನಭೈರಾದೇವಿ ಐವತ್ತನಾಲ್ಕು ವರ್ಷ ರಾಜ್ಯಭಾರವನ್ನು ಮಾಡಿ, ಪೋರ್ಚುಗೀಸರೊಂದಿಗೆ ವ್ಯಾಪಾರ ವೃದ್ಧಿ ಮಾಡಿ, ನಮ್ಮ ದೇಶದಿಂದ ಕಾಳುಮೆಣಸು ಮತ್ತು ಇತರ ವಸ್ತುಗಳನ್ನು ರಫ್ತು ಮಾಡಿ, ಕೃಷಿಗೆ ಪ್ರೋತ್ಸಾಹ ನೀಡಿದಳು. ಜೊತೆಗೆ ಪೋರ್ಚುಗೀಸರೊಂದಿಗೆ ಹೋರಾಟ ಮಾಡಿ ಸ್ವಾತಂತ್ರ್ಯ ಮತ್ತು ಏಕತೆಯನ್ನು ಉಳಿಸುವುದಕ್ಕಾಗಿ ಪ್ರಯತ್ನಪಟ್ಟವಳು’ ಎಂಬ ಮಾತನ್ನು ಅವರು ಹೇಳಿದರು. ಗೋವಾದಿಂದ ಪೋರ್ಚುಗೀಸರು ಹೊನ್ನಾವರ ದಾಟಿ ಈ ಕಡೆ ಬರದಂತೆ ಆಕೆ ತಡೆದಳು. ಅವಳು ಮಾಡಿದ ಹೋರಾಟ ಮತ್ತು ಆಕೆಯ ಸಾಧನೆಗೆ ನಾವು ತಲೆಬಾಗಿ ಗೌರವಿಸಲೇಬೇಕು. ಯಾಕೆಂದರೆ ಪೋರ್ಚುಗೀಸರು ಆಳುತ್ತಿದ್ದ ಗೋವಾದಲ್ಲಿ ಹಿಂದೂಗಳು ಬಹಳ ಶೋಷಣೆ ಅನುಭವಿಸಿದರು. ಮತಾಂತರಕ್ಕೂ ಒಳಗಾದರು. ಕೆಲವರು ಸಂಸ್ಕೃತಿ, ಸಂಪ್ರದಾಯ ಬಿಟ್ಟಿರಲು ಸಾಧ್ಯವಿಲ್ಲ ಎಂದು ಅಲ್ಲಿಂದ ಓಡಿ ಹೋದರು. ಚೆನ್ನಭೈರಾದೇವಿ ರಾಣಿಯು ಅವರ ಆಕ್ರಮಣವನ್ನು ತಡೆದಳು ಮತ್ತು ಇಲ್ಲಿಯ ಸಂಸ್ಕೃತಿ ಉಳಿಸುವಲ್ಲಿ ಮಹತ್ತರ ಪಾತ್ರವಹಿಸಿದಳು. ಅಂತಹ ಪ್ರಮುಖವಾದ ರಾಣಿಯ ಬಗ್ಗೆ ಬಹಳಷ್ಟು ಜನರಿಗೆ ತಿಳಿದೇ ಇರಲಿಲ್ಲ. ಸ್ಮರಣೆಯೂ ಇಲ್ಲ. ಆದ್ದರಿಂದ ಚೆನ್ನಭೈರಾದೇವಿ ರಾಣಿಯ ಬಗ್ಗೆ, ಆಕೆ ಮಾಡಿದ ಕಾರ್ಯಗಳ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಬೇಕು ಹಾಗೂ ಆಕೆಗೆ ತಕ್ಕ ಗೌರವವೂ ದೊರೆಯಬೇಕು ಎಂಬ ನಿಟ್ಟಿನಲ್ಲಿ ಅವಳನ್ನು ಸ್ಮರಿಸುವ ಯೋಜನೆಯನ್ನು ಶ್ರೀ ಕ್ಷೇತ್ರದಿಂದ ಮಾಡಲು ಮುಂದಾಗಿದ್ದೇವೆ. ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರೇರಣೆಯಿಂದ ಒಂದು ಸಮಿತಿ ರಚನೆ ಮಾಡಿ ಹೊನ್ನಾವರದಲ್ಲಿ ಚೆನ್ನಭೈರಾದೇವಿ ಸ್ಮಾರಕವನ್ನು ಮಾಡುವ ಯೋಜನೆ ಕೈಗೊಂಡಿದ್ದೇವೆ. ರಾಜ್ಯ ಸರ್ಕಾರ ಈಗಾಗಲೇ ಮಂಜೂರು ಮಾಡಿದ ಜಾಗದಲ್ಲಿ ಇನ್ನೊಂದು ವರುಷದ ಒಳಗಾಗಿ ಸ್ಮಾರಕ ನಿರ್ವಣವಾಗಲಿದೆ. ಹೀಗೆ ಇದು ಸಾಹಿತ್ಯ ನಮಗೆ ಕೊಡಬಹುದಾದಂಥ ಪ್ರೇರಣೆ ಹಾಗೂ ಕೊಡುಗೆಯಾಗಿದೆ.

ನಮ್ಮ ದೇಶದ ಒಂದು ದುರಂತ ಎಂದರೆ, ಮೊದಲು ನಾವು ನಮ್ಮವರನ್ನೇ ಎದುರು ಹಾಕಿಕೊಂಡು ಬದುಕಬೇಕಾದ ಸ್ಥಿತಿ. ಹೊನ್ನಾವರದ ಸುತ್ತಮುತ್ತಲಿರುವ ಹಲವರು ಹಾಗೂ ಬಿಜಾಪುರದ ರಾಜರು ಆಕೆಯ ಮೇಲೆ ದಾಳಿ ಮಾಡಿದರು. ಯಾಕೆಂದರೆ ಚೆನ್ನಭೈರಾದೇವಿ ರಾಣಿಯ ಬಳಿ ತುಂಬ ಸಂಪತ್ತಿದೆ. ವ್ಯಾಪಾರ-ವ್ಯವಹಾರ ಮಾಡಿ ಸಂಪತ್ತುಗಳಿಸಿದ್ದಾಳೆ. ಈ ಸಂಪತ್ತು ದೋಚಬೇಕು ಎಂದು ಶತ್ರುಗಳಾಗಿದ್ದರು. ಹಾಗಾಗಿ ನಮ್ಮವರೇ, ನಮ್ಮ ನೆರೆಕರೆಯವರೇ ನಮ್ಮ ಮೊದಲ ಶತ್ರುಗಳು ಎಂಬ ಪರಿಸ್ಥಿತಿ. ಇಂತಹ ಮಾದರಿ ಹೆಣ್ಣು, ರಾಣಿಯರನ್ನು ಪರಿಚಯಿಸಿದ ಕೀರ್ತಿ ಒಬ್ಬ ಸಾಹಿತಿಗೆ ಬರುತ್ತದೆ. ಇಂತಹ ಸಾಹಿತ್ಯದಿಂದಾಗಿ ಅನೇಕ ಮಂದಿ ಸ್ಮರಣೀಯರಾದ ನಮ್ಮ ಹಿರಿಯರನ್ನ ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತಾಗಿದೆ. ರಾಷ್ಟ್ರ, ರಾಜ್ಯದ ಬಗ್ಗೆ, ನಮಗಾಗಿ ತ್ಯಾಗ ಮಾಡಿದ ನಮ್ಮ ಹಿರಿಯರ ಬಗ್ಗೆ ಗೌರವ ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಮತ್ತು ನಮ್ಮ ರಾಜ್ಯ, ನಮ್ಮ ಭಾಷೆ ಎನ್ನುವ ಪ್ರೀತಿಯನ್ನು ತೋರಿಸಬೇಕಾದ ಕಾರ್ಯವನ್ನು ನಾವು ಮಾಡಬೇಕಿದೆ.

ಕರಾವಳಿಯವರಿಗೆ ತುಳು ಮಾತೃಭಾಷೆ. ಕಯ್ಯಾರ ಕಿಂಞ್ಞಣ್ಣ ರೈಯವರು ತುಳುವರಿಗೆ ಇಬ್ಬರು ತಾಯಂದಿರು ಎಂದು ಬಣ್ಣಿಸಿದ್ದಾರೆ. ಒಂದು ಜನ್ಮ ಕೊಟ್ಟ ತಾಯಿ ಇನ್ನೊಂದು ಸಾಕಿ ಸಲಹಿದ ತಾಯಿ ಎಂದು ಹೇಳುತ್ತಿದ್ದರು. ದೇವಕಿ ಕೃಷ್ಣನಿಗೆ ಜನ್ಮಕೊಟ್ಟವಳಾದರೂ ಯಶೋದೆ ಬೆಳೆಸಿದವಳು. ತುಳುವರಿಗೆ ಜನ್ಮ ನೀಡಿ, ಬೆಳೆಸಿದ್ದು ಮಾತೃಭಾಷೆಯಾದ ತುಳು, ಆದರೆ ಶಿಕ್ಷಣ, ವ್ಯಾವಹಾರಿಕ ಜ್ಞಾನ, ವ್ಯಕ್ತಿತ್ವ ರೂಪಿಸಿ ಕೊಟ್ಟದ್ದು ಕನ್ನಡ ಭಾಷೆ. ಈ ಎರಡೂ ಮಾತೆಯರನ್ನು ನಾವು ರಕ್ಷಣೆ ಮಾಡಬೇಕಾಗಿದೆ. India will conquer her conquerors culturally not politically ಇದು ಅರ್ನಾಲ್ಡ್ ಟ್ಯಾಂನ್ಬೆ ಹೇಳಿದ ಮಾತು ಸ್ಮರಣೀಯ. ನಮ್ಮ ಶತ್ರುಗಳು ಹಾಗೂ ನಮ್ಮನ್ನು ಯಾರು ಆಕ್ರಮಿಸಿಕೊಳ್ಳಬೇಕು ಎಂದು ಹೇಳುತ್ತಾರೋ, ಅವರನ್ನು ನಾವು ಆಕ್ರಮಿಸಬಹುದು, ಸೋಲಿಸಬಹುದು. ಹೇಗೆಂದರೆ ಸಾಂಸ್ಕೃತಿಕವಾಗಿ. ರಾಜಕೀಯವಾಗಿ ಅಥವಾ ಯುದ್ಧದ ಶಕ್ತಿಯಿಂದಲ್ಲ. ಬದಲಾಗಿ ಸಾಂಸ್ಕೃತಿಕವಾಗಿ ನಮ್ಮನ್ನ ನಾವು ಸದೃಢಪಡಿಸಿಕೊಂಡರೆ ನಮ್ಮ ಮೇಲೆ ಆಗಬಹುದಾದ ಆಘಾತವನ್ನು ನಾವು ಎದುರಿಸಬಹುದು ಎಂದು ಹೇಳುತ್ತಾರೆ. ಅಭಿಮಾನ ಸಾಹಿತಿಗಳ ಮೇಲೆ ಇದ್ದರೆ ಸಾಲದು ಅವರ ಸಾಹಿತ್ಯದ ಮೇಲಿರಬೇಕು. ಅಧ್ಯಯನ ಆಸಕ್ತಿಯನ್ನು ರೂಢಿಸಿಕೊಳ್ಳಬೇಕು. ಯುವಕರಲ್ಲಿ ಸಾಹಿತ್ಯದ ಮೇಲೆ ಅಭಿಮಾನ, ಭಕ್ತಿ ಇದ್ದಾಗ ಸಾಹಿತ್ಯಾವಲೋಕನದ ಕಡೆ ಮನಸ್ಸು ಹರಿದಾಗ ಖಂಡಿತವಾಗಿಯೂ ನಮ್ಮ ಯುವಸಮಾಜ ಏಳಿಗೆಯನ್ನು ಸಾಧಿಸುತ್ತದೆ. ಆದ್ದರಿಂದ ‘ನಾನು ಬುದ್ಧಿವಂತ, ನಾನು ಹೇಳುವ ಮಾತೇ ಅಂತಿಮ, ನನ್ನ ಮಾತು ಕೇಳುವವರು ಮಾತ್ರ ನೀವು, ಹೇಳುವವನು ನಾನು’ ಎನ್ನುವ ಭಾವನೆ ಬರಬಾರದು. ನಾವೆಲ್ಲರೂ ಸೇರಿ ಸಾಹಿತ್ಯ, ಸಂಸ್ಕೃತಿಯ ತೇರನ್ನು ಎಳೆಯುವ ಕಾರ್ಯವನ್ನು ಮಾಡಬೇಕು.

ಇಂದು ವಿವಿಧ ಭಾಷೆಗಳ ಸಾಹಿತಿಗಳ ಸಾಹಿತ್ಯ ಭಾಷಾಂತರವಾಗುತ್ತಿದೆ ಮತ್ತು ಅವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ. ನನಗೆ ಆಶ್ಚರ್ಯವೇನೆಂದರೆ ನಮ್ಮ ಸಂಬಂಧಿಕರ ಮನೆಗೆ ತೆರಳಿದಾಗ ‘ನೀವು ಮಲಯಾಳಂ, ತಮಿಳು, ಹಿಂದಿ, ಮರಾಠಿಯ ಈ ಸಿನಿಮಾ ನೋಡಿದ್ದೀರ?’ ಎಂದು ಕೇಳುತ್ತಾರೆ. ‘ಯಾಕೆ ಇತರ ಭಾಷೆಯ ಸಿನಿಮಾ ನೋಡುತ್ತೀರಾ?’ ಎಂದು ಕೇಳಿದರೆ ಅವರು ‘ಭಾಷೆ-ಸಂಸ್ಕೃತಿಯ ವೈವಿಧ್ಯತೆ ಕುತೂಹಲಕಾರಿಯಾಗಿರುತ್ತದೆ’ ಎನ್ನುತ್ತಾರೆ. ಎಂದರೆ ಕನ್ನಡ ಸಿನಿಮಾವನ್ನು ಎಷ್ಟು ಜನರು ನೋಡುತ್ತಾರೋ ಅಷ್ಟೇ ಇತರ ಭಾಷೆಯ ಸಿನಿಮಾ ಮತ್ತು ಭಾಷೆಯ ಆಸಕ್ತಿ ಹೊಂದಿದ್ದಾರೆ. ಭಾಷೆ ಮತ್ತು ಸಂಸ್ಕೃತಿ ಇದು ಅಖಂಡವಾದುದು. ಯುವಪೀಳಿಗೆ ಸಾಹಿತ್ಯಕ್ಕೆ ಹೆಚ್ಚು ಒಗ್ಗಿಕೊಳ್ಳಬೇಕು. ಅಧ್ಯಯನ ಮಾಡಬೇಕು. ಸಾಹಿತ್ಯದ ಮೂಲಕ ನಮ್ಮ ದೇಶದ ವೈವಿಧ್ಯ, ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕು. ರಾಮಾಯಣ ಮತ್ತು ಮಹಾಭಾರತ ಎರಡೂ ನಮಗೆ ಒಂದು ನಿದರ್ಶನವನ್ನು ತೋರಿಸುತ್ತವೆ. ಅದೇನೆಂದರೆ ಸೋಲು ಬಂದಾಗ ನಿರಾಶರಾಗಬೇಡಿ, ಬೆನ್ನು ತೋರಿಸಬೇಡಿ. ಎದುರಿಸಿದರೆ ಮುಂದೊಂದು ದಿನ ಒಳ್ಳೆಯ ಬೆಳಕು ಬರುತ್ತದೆ ಎಂದು. ಹಾಗಾಗಿ ದೇಶದ ಸಂರಕ್ಷಣೆ ಬಗ್ಗೆ ಜಾಗೃತರಾಗೋಣ. ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳೋಣ. ಭಾರತೀಯರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಪಡೋಣ!.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net