

ಬೆಂಗಳೂರು: 2ಡಿ ಮೀಸಲಾತಿ ಕೊಟ್ಟಿದ್ದರಿಂದ ಹೋರಾಟಕ್ಕೆ ಮೊದಲ ಹಂತದ ಸಾಧನೆ ಸಿಕ್ಕಿದೆ. ಚುನಾವಣೆ ನಂತರ ಕೇಂದ್ರ ಓಬಿಸಿ ಮೀಸಲಾತಿ ಹೋರಾಟ ಮಾಡೋಣ. ಎಲ್ಲ ಪಕ್ಷದವರು ನಮಗೆ ಬೆಂಬಲ ಕೊಟ್ಟಿದ್ದಾರೆ. ಈ ಹೋರಾಟವನ್ನು ಇಲ್ಲಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳುತ್ತಿದ್ದಂತೆ, ನಾನು ಇದನ್ನು ಒಪ್ಪುವುದಿಲ್ಲ, ಇದನ್ನು ವಿರೋಧಿಸಿ ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ವಿಜಯಾನಂದ ಕಾಶಪ್ಪನವರ್ ರಾಜೀನಾಮೆ ಸಲ್ಲಿಸಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದ್ದಂತೆ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಪರ-ವಿರೋಧ ಚರ್ಚೆ ನಡೆದಿದ್ದು, ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದೆ. ಹೋರಾಟಗಾರರ ನಡುವೆ ನಡೆದ ಮಾತಿನ ಚಕಮಕಿ ಕೈ-ಕೈ ಮೀಲಾಯಿಸುವ ಹಂತಕ್ಕೆ ತಲುಪಿದೆ. ಇದನ್ನೂ ಓದಿ: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಪೊಲೀಸ್ ಕಾನ್ಸ್‌ಟೇಬಲ್ ಆಯ್ಕೆ
ನಮ್ಮ ಹೋರಾಟಕ್ಕೆ ಮೊದಲ ಗೆಲುವು ಪಡೆದಿದ್ದೇವೆ. ಚುನಾವಣೆ ವರ್ಷದಲ್ಲಿ ನಮಗೆ 2ಡಿ ಮಾಡಿ ಮೀಸಲಾತಿ ಕೊಟ್ಟಿದ್ದಾರೆ. ನಮ್ಮ ಹೋರಾಟದಿಂದ ಲಿಂಗಾಯತ ಸಮುದಾಯದ ಎಲ್ಲರಿಗೂ ಮೀಸಲಾತಿ ಸಿಕ್ಕಿದೆ. ನಮ್ಮ ಜನ ಮನೆ ಬಿಟ್ಟು, ಮಠ ಬಿಟ್ಟು ನನ್ನ ಜನ ಬಹಳ ಹೋರಾಟ ಮಾಡಿದ್ದಾರೆ. ಅಷ್ಟೊಂದು ಶಕ್ತಿ ಕೊಟ್ಟಿದ್ದಾರೆ, ಅವರ ಋಣ ತೀರಿಸಲು ಸಾಧ್ಯವಿಲ್ಲ. ಎರಡು ವರ್ಷಗಳ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ. ಇತಿಹಾಸದಲ್ಲಿ ಇಂತಹ ಬೆಂಬಲ ಯಾರಿಗೂ ಸಿಕ್ಕಿರಲಿಲ್ಲ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಮಧ್ಯಸ್ಥಿಕೆಯಿಂದ ಸಿಎಂ ಅವರ ಆದೇಶ ಪಾಲಿಸಿ ಮೀಸಲಾತಿ ಕೊಟ್ಟಿದ್ದಾರೆ. ಸರ್ಕಾರದ ಆದೇಶ ಸಿಕ್ಕ ಮೇಲೆ ಸಿಎಂಗೆ ಅಭಿನಂದನೆ ತಿಳಿಸುತ್ತೇನೆ. 15 ಪರ್ಸಂಟೇಜ್ ಸಿಗಬೇಕಿತ್ತು, 7 ರಷ್ಟು ಸಿಕ್ಕಿದೆ ಎಂದು ನೋವಾಗಿದೆ. ಚುನಾವಣೆ ಏನೇ ಇರಲಿ. ಅದು ನಮಗೆ ಸಂಬಂಧ ಇಲ್ಲ, ನೀತಿ ಸಂಹಿತೆ ಬರುವುದರೊಳಗೆ ನಮಗೆ ನ್ಯಾಯ ಸಿಗಬೇಕೆಂಬುದು ನಮ್ಮ ಅಭಿಪ್ರಾಯ ಆಗಿತ್ತು. ಈಗ ತಾತ್ಕಾಲಿಕವಾಗಿ ಹೋರಾಟ ಸ್ಥಗಿತಗೊಳಿಸಿದ್ದೇವೆ. ಮತ್ತೆ ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸಬೇಕೆಂದು ಹೋರಾಟ ಮಾಡುತ್ತೇವೆ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಬಡವರ ಸೇವೆಯನ್ನು ಸರ್ವೋಚ್ಛ ಸೇವೆಯೆಂದು ಭಾವಿಸಿದೆ: ಪ್ರಧಾನಿ ಮೋದಿ