

Karnika Nudi : ಜಿಲ್ಲೆಯ ಪ್ರಸಿದ್ಧ ಶ್ರೀ ಕ್ಷೇತ್ರಗಳಲ್ಲಿ ದೊಡ್ಡಮೈಲಾರಲಿಂಗೇಶ್ವರ ದೇವಸ್ಥಾನವೂ ಒಂದು. ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರದ್ದು. ಹೀಗಾಗಿ ಪ್ರತಿವರ್ಷ ಈ ದೇವರು ನುಡಿಯುವ ಕಾರ್ಣಿಕ ನುಡಿ ( Karnika Nudi ) ಗೆ ಲಕ್ಷಾಂತರ ಭಕ್ತರು ಕಾದು ಕುಳಿತಿರುತ್ತಾರೆ.
ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ವಿಜಯನಗರ ಪಟ್ಟಣದ ಹೊರವಲಯದಲ್ಲಿ ನಿನ್ನೆ (ಫೆ.12) ನಡೆದ ದೊಡ್ಡಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ‘ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್’ಎಂದು ಗೊರವಯ್ಯ ಕೋಟೆಪ್ಪ ಅವರು ದೈವವಾಣಿ ನುಡಿದರು.
ಕಾರ್ಣಿಕ ನುಡಿಗೂ ಮುನ್ನ ಗೊರವಯ್ಯ ಕೋಟೆಪ್ಪ ಅವರು 9 ದಿನಗಳ ಉಪವಾಸ ವ್ರತ ಆಚರಿಸಿದರು. ನಿನ್ನೆ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ಸಂಜೆ 5.46ಕ್ಕೆ ಬಿಲ್ಲನ್ನೇರುತ್ತಿದ್ದಂತೆ ಅಲ್ಲಿದ್ದವರೆಲ್ಲ ಒಂದು ಕ್ಷಣ ಮೌನವಾದರು. ಇದಾದ ಕೆಲವೇ ಕ್ಷಣಗಳಲ್ಲಿ "ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್" ಎಂದು ಕಾರ್ಣಿಕವನ್ನು ನುಡಿದು ಕೋಟೆಪ್ಪ ಕೆಳಗೆ ಬಿದ್ದರು. ಈ ವೇಳೆ ಅವರನ್ನು ಗೊರವ ಸಮೂಹ ಎತ್ತಿ ಹಿಡಿದರು.
ಇನ್ನು ಕಾರ್ಣಿಕ ನುಡಿಯ ಅರ್ಥವನ್ನು ನೋಡಿದಾಗ, ಪ್ರಸಕ್ತ ವರ್ಷದಲ್ಲಿ ಚೆನ್ನಾಗಿ ಮಳೆಯಾಗಿ, ಫಸಲು ಸಮೃದ್ಧವಾಗಿ ಬರುತ್ತದೆ. ಆದರೆ, ಇಳುವರಿ ಕುಂಠಿತವಾಗಲಿದೆಯಂತೆ. ಇನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿಯೂ ಕೂಡ ಇದೇ ರೀತಿ ಕಾರ್ಣಿಕವನ್ನು ನುಡಿಯಲಾಗಿದೆ. ನೀರಿನ ಕೊಡ ಉರಡತಲೆ ತುಪ್ಪದ ಕೊಡ ಉಕ್ಕತಲೆ ಪರಾಕ್ ಎಂದು ಗೊರವಯ್ಯ ಹನುಮಗೌಡ ಗುರೇಗೌಡರ ಕಾರ್ಣಿಕ ನುಡಿದರು.