ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ, ಕೇಡು ಬಯಸುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ತಾಳೆ: ವಿಜಯಲಕ್ಷ್ಮಿ ದರ್ಶನ್

Untitled-design-2024-06-26T191409.102
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೆ ಅವರ ಪತ್ನಿ ವಿಜಯಲಕ್ಷ್ಮಿ ಅವರು ಮಗ ವಿನೀಶ್​​ ಅವರೊಂದಿಗೆ ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್​ ಅವರನ್ನು ಭೇಟಿ ಮಾಡಿದ್ದರು.

ಪತಿ ದರ್ಶನ್​ ಭೇಟಿ ಬಳಿಕ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ದರ್ಶನ್‌ಗೆ ಕೇಡು ಬಯಸುವವರನ್ನು ಚಾಮುಂಡೇಶ್ವರಿ ನೋಡಿಕೊಳ್ತಾಳೆ ಎಂದು ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಂತಿ ಪಾಠ ಮಾಡಿದ್ದಾರೆ.

ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ “ಸೆಲೆಬ್ರಿಟಿಗಳನ್ನು" ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೆ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನ್​ಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ.

ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮಯದಲ್ಲಿ, ದರ್ಶನ ಅವರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net