

ಮಂಗಳೂರು: ಮಂಗಳೂರಿನ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ಆಯೋಜಿಸಿದ್ದ ದಾಸವರೇಣ್ಯ ವಿಜಯದಾಸರು ಚಲನಚಿತ್ರ ಉಚಿತ ಪ್ರದರ್ಶನ ಸಂಪೂರ್ಣ ಯಶಸ್ವಿಯಾಯಿತು.
ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತ ಕಾಮಾನಂದಜಿ ಮಾತನಾಡಿ, ನಮ್ಮ ಸಂಸ್ಕೃತಿ - ಸಂಸ್ಕಾರಕ್ಕೆ ದಾಸಸಾಹಿತ್ಯದ ಕೊಡುಗೆ ಬಹು ದೊಡ್ಡದು. ದಾಸರು ತಮ್ಮ ಪದ ಪದ್ಯಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾ, ಜನರಲ್ಲೂ ಭಕ್ತಿಯನ್ನು ಬಿತ್ತಿದ್ದಾರೆ. ಜೀವನ ಮೌಲ್ಯಗಳ ವರ್ಧನೆಗೆ ಅಪಾರ ಕೊಡುಗೆ ನೀಡಿದ್ದಾರೆ. ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡುತ್ತಿದೆ. ಶ್ರೀಶಾ ಸೌಹಾರ್ದ ಸೊಸೈಟಿಯು ತಾನು ಗಳಿಸಿದ ಲಾಭದ ದೊಡ್ಡ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಅನೇಕ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಚಿತ್ರದ ನಿರ್ದೇಶಕ ಮಧುಸೂದನ ಹವಾಲ್ದಾರ್ ಅವರನ್ನು ಪ್ರತಿಷ್ಠಾನ ಹಾಗೂ ಶ್ರೀಶಾ ಸೊಸೈಟಿಯ ವತಿಯಿಂದ ಸನ್ಮಾನಿಸಲಾಯಿತು.
ಪ್ರತಿಷ್ಠಾನ ಮತ್ತು ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ರವರು ಸ್ವಾಗತಿಸಿದರು. ಸುಜಾತ ಕಾರಂತ್ ಪ್ರಾರ್ಥಿಸಿದರು., ಸುರೇಶ್ ಬೈಂದೂರ್ ವಂದಿಸಿದರು. ಸಂಜನಾ ಮೂರ್ತಿ ನಿರೂಪಿಸಿದರು.