

ಬೆಂಗಳೂರು: ನಾಡಿನ ಜನಪದ ಕಲೆಗಳ ಕುರಿತಾಗಿ ಈಗಾಗಲೇ ಹಲವಾರು ಸಿನಿಮಾಗಳು ಬಂದಿವೆ. ಅದಕ್ಕೆ ಹೊಸ ಸೇರ್ಪಡೆ ‘ರುದ್ರಾಭಿಷೇಕಂ’. ಈ ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಹಾಗೂ ವೀರಭದ್ರ ದೇವರ ಇತಿಹಾಸ ಹೇಳುವ ವೀರಗಾಸೆ ಕಲೆಯ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ವಸಂತ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇಲ್ಲಿ ವೀರಗಾಸೆ ಕಲಾವಿದನಾಗಿ ನಟ ವಿಜಯ್ ರಾಘವೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ‘ಬಿಗ್‌ಬಾಸ್ ಕನ್ನಡ- ಸೀಸನ್ 8’ರ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿಕ್ಕಬಳ್ಳಾಪುರದ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ದೇವನಹಳ್ಳಿಯ ಚಿಕ್ಕತದಮಂಗಲದಲ್ಲಿ ಸೆಟ್ ಹಾಕಲಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ಹಾಡಿನ ದೃಶ್ಯಗಳನ್ನು ಸೆರೆಹಿಡಿಯಲಾಯಿತು. ವೀರಗಾಸೆ ಕಲಾವಿದನಾಗಿ ವಿಜಯ್ ರಾಘವೇಂದ್ರ ಭರ್ಜರಿಯಾಗಿ ಮಿಂಚಿದ್ದಾರೆ. ವೇಷಭೂಷಣಗಳಿಗೆ ಒಪ್ಪಿಗೆಯಾಗಿವೆ. ವಸಂತ್‌ಕುಮಾರ್, ‘ಕಳೆದ 45 ದಿನಗಳಿಂದ ಶೂಟಿಂಗ್ ಮಾಡಲಾಗಿದೆ. ಶೂಟಿಂಗ್ ಜತೆಗೆ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಆರಂಭಿಸಲಾಗಿದೆ. ಈ ಕ್ಲೈಮ್ಯಾಕ್ಸ್ ಹಾಡು ಈ ಚಿತ್ರದ ಹೈಲೈಟ್. ಇನ್ಮುಂದೆ ವೀರಗಾಸೆ ಕಲಾವಿದರು ಎಲ್ಲೇ ನೃತ್ಯ ಮಾಡಿರೂ ಈ ಹಾಡನ್ನಿಟ್ಟುಕೊಂಡು ವೀರಗಾಸೆ ಕುಣಿತ ನಡೆಸಬೇಕು. ಆ ರೀತಿಯಲ್ಲಿ ಮೂಡಿಬಂದಿದೆ. ಜೂನ್ ಅಥವಾ ಜುಲೈನಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಚನೆಯಿದೆ’ ಎಂದರು. ವಿ.ಮನೋಹರ್ ಸಂಗೀತ, ಮುತ್ತುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.
ದ್ವಿಪಾತ್ರದಲ್ಲಿ ನಟನೆ: ‘ರುದ್ರಾಭಿಷೇಕಂ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮೊದಲ ಬಾರಿಗೆ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಂಡಿದ್ದು, ಜತೆಗೆ ದ್ವಿಪಾತ್ರದಲ್ಲಿದ್ದಾರೆ. ‘ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ವೀರಗಾಸೆ ಕಲೆಯ ಮಹತ್ವವನ್ನು ಈ ಚಿತ್ರದ ಮೂಲಕ ಸಾರಲಾಗುತ್ತಿದೆ. ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ಇಲ್ಲಿ ಹೇಳಲಾಗುತ್ತದೆ. ಇಲ್ಲಿ ನಾನು ದ್ವಿಪಾತ್ರದಲ್ಲಿದ್ದು, ತಂದೆ-ಮಗನ ಪಾತ್ರದಲ್ಲಿದ್ದೇನೆ. ವೀರಗಾಸೆ ಕುರಿತಾಗಿರುವ ಈ ಹಾಡು ರೋಮಾಂಚನಗೊಳಿಸುವಂತಿದೆ. ಒಂದು ಜನಪದ ಕಲೆಯನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನ ನಮ್ಮದು. ನಾನು ಮೊದಲ ಬಾರಿಗೆ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ವಿಜಯ್ ರಾಘವೇಂದ್ರ ಮಾಹಿತಿ ನೀಡಿದರು.