

Vijay-Rashmika: ಅ.03ರಂದು ಸದ್ದಿಲ್ಲದೇ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ದಕ್ಷಿಣ ಭಾರತದ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಈ ಮೂಲಕ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಹಾಗೂ ಸಿಹಿ ಸುದ್ದಿ ಎರಡನ್ನೂ ನೀಡಿದರು.
ಕೇವಲ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ರಶ್ಮಿಕಾ-ವಿಜಯ್ ನಿಶ್ಚಿತಾರ್ಥ ಮಾಡಿಕೊಂಡರು. ವರದಿಗಳ ಪ್ರಕಾರ, ಈ ಜೋಡಿಯ ಮದುವೆ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯುವ ನಿರೀಕ್ಷೆಯಿದೆ. ಆದಾಗ್ಯೂ, ಎಂಗೇಜ್ಮೆಂಟ್ ಕುರಿತಂತೆ ಇಬ್ಬರೂ ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ನಿಶ್ಚಿತಾರ್ಥದ ಫೋಟೋ ಅಥವಾ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಇಲ್ಲೊಂದು ಫೋಟೋ ಎಂಗೇಜ್ಮೆಂಟ್ ಆಗಿರುವುದು ಖಚಿತ ಎಂಬುದನ್ನು ದೃಢಪಡಿಸಿದೆ.
ಇತ್ತೀಗಷ್ಟೇ ವಿಜಯ್ ದೇವರಕೊಂಡ ಮತ್ತು ಅವರ ಸಹೋದರ ಆನಂದ್ ದೇವರಕೊಂಡ ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿರುವ ದೃಶ್ಯವೊಂದು ಜಾಲತಾಣದಲ್ಲಿ ಹರಿದಾಡಿದೆ. ಈ ಸಂದರ್ಭದಲ್ಲಿ, ವಿಜಯ್ ಅಭಿಮಾನಿಗಳು ನೀಡಿದ ಹೂಗುಚ್ಚವನ್ನು ಸ್ವೀಕರಿಸುತ್ತಿರುವ ಫೋಟೋ ಸಖತ್ ಸದ್ದು ಮಾಡಿದೆ. ಕಾರಣ, ಆ ಫೋಟೋದಲ್ಲಿ ವಿಜಯ್ ಕೈಬೆರಳಲ್ಲಿ ಉಂಗುರ ಇರುವುದು ಕಾಣಿಸಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಫ್ಯಾನ್ಸ್, ಇದು ಪಕ್ಕಾ ನಿಶ್ಚಿತಾರ್ಥದ ಉಂಗುರವೇ ಎಂದು ನಿರ್ಧರಿಸಿದ್ದಾರೆ,(ಏಜೆನ್ಸೀಸ್).