

ಬೆಂಗಳೂರು: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಯಶಸ್ವಿ ಆಯೋಜನೆಯ ಬಳಿಕ ದೇಶೀಯ ಕ್ರಿಕೆಟ್ನ ಪ್ರತಿಷ್ಠಿತ ಏಕದಿನ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಗೆ ವೇದಿಕೆ ಸಜ್ಜಾಗಿದೆ. ವಿಶ್ವಕಪ್ ಫೈನಲ್ನಲ್ಲಿ ಕಂಡ ನಿರಾಸೆಯ ಬಳಿಕ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ತಂಡ ಕಟ್ಟುವುದು ಭಾರತದ ಗುರಿಯಾಗಿರಲಿದೆ. ಈ ನಿಟ್ಟಿನಲ್ಲಿ ಆಯ್ಕೆಗಾರರ ಗಮನಸೆಳೆಯಲು ಯುವ ಕ್ರಿಕೆಟಿಗರಿಗೆ ಈ ಟೂರ್ನಿ ಉತ್ತಮ ಅವಕಾಶವಾಗಿರಲಿದೆ.
ದೇಶದ 5 ಭಿನ್ನ ನಗರಗಳಲ್ಲಿ ಟೂರ್ನಿಯ ಗುಂಪು ಹಂತದ ಪಂದ್ಯಗಳು ಆಯೋಜನೆಗೊಂಡಿವೆ. ಬೆಂಗಳೂರಿನಲ್ಲಿ ಎ ಗುಂಪಿನ ಪಂದ್ಯಗಳು ನಡೆಯಲಿದ್ದರೆ, ಕರ್ನಾಟಕ ತಂಡವಿರುವ ಸಿ ಗುಂಪಿನ ಪಂದ್ಯಗಳು ಅಹಮದಾಬಾದ್ನಲ್ಲಿ ನಡೆಯಲಿವೆ. ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕನಿಷ್ಠ ನಾಕೌಟ್ ಹಂತಕ್ಕೂ ಪ್ರವೇಶಿಸದೆ ನಿರಾಸೆ ಅನುಭವಿಸಿರುವ ಕರ್ನಾಟಕ ತಂಡ ಏಕದಿನ ಕ್ರಿಕೆಟ್ನಲ್ಲಿ ಪುಟಿದೇಳುವ ಹಂಬಲದಲ್ಲಿದೆ. ರಾಜ್ಯಕ್ಕೆ ಜಮ್ಮು-ಕಾಶ್ಮೀರ ತಂಡ ಮೊದಲ ಎದುರಾಳಿಯಾಗಿದೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಆರ್. ಸಮರ್ಥ್ (ಉಪನಾಯಕ), ದೇವದತ್ ಪಡಿಕಲ್, ಮನೀಷ್ ಪಾಂಡೆ, ಅಭಿನವ್ ಮನೋಹರ್, ನಿಕಿನ್ ಜೋಸ್, ಬಿಆರ್ ಶರತ್, ಕೆ. ಗೌತಮ್, ಶುಭಾಂಗ್ ಹೆಗ್ಡೆ, ವೈಶಾಕ್ ವಿಜಯ್ ಕುಮಾರ್, ವಿದ್ವತ್ ಕಾವೇರಪ್ಪ, ವಿ. ಕೌಶಿಕ್, ಮನೋಜ್ ಭಾಂಡಗೆ, ಕೆಎಲ್ ಶ್ರೀಜಿತ್, ಜೆ. ಸುಚಿತ್.
ಕರ್ನಾಟಕದ ಪಂದ್ಯಗಳು
ದಿನಾಂಕ: ಎದುರಾಳಿ
ನ. 23: ಜಮ್ಮು-ಕಾಶ್ಮೀರ
ನ. 25: ಉತ್ತರಾಖಂಡ
ನ. 27: ದೆಹಲಿ
ನ. 29: ಬಿಹಾರ
ಡಿ.1: ಚಂಡೀಗಢ
ಡಿ. 3: ಹರಿಯಾಣ
ಡಿ. 5: ಮಿಜೋರಾಂ
ಆರಂಭ: ಬೆಳಗ್ಗೆ 9.00
ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಆಡುವ 38 ತಂಡಗಳನ್ನು 5 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ಎ, ಬಿ, ಸಿ ಗುಂಪಿನಲ್ಲಿ ತಲಾ 8 ತಂಡಗಳಿದ್ದರೆ, ಡಿ, ಇ ಗುಂಪಿನಲ್ಲಿ ತಲಾ 7 ತಂಡಗಳಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್ ಹಂತಕ್ಕೇರಲಿವೆ. ಈ ಪೈಕಿ ಒಟ್ಟಾರೆ ಅಂಕ/ಜಯ/ರನ್ರೇಟ್ ಆಧಾರದಲ್ಲಿ ಅಗ್ರ 6 ತಂಡಗಳು ನೇರವಾಗಿ ಕ್ವಾರ್ಟರ್ಫೈನಲ್ಗೇರಲಿದ್ದರೆ, ಉಳಿದ 4 ತಂಡಗಳು ಪ್ರಿ ಕ್ವಾರ್ಟರ್ಫೈನಲ್ನಲ್ಲಿ ಆಡಲಿವೆ. ನಾಕೌಟ್ ಪಂದ್ಯಗಳು ಡಿಸೆಂಬರ್ 9ರಿಂದ 16ರವರೆಗೆ ರಾಜ್ಕೋಟ್ನಲ್ಲಿ ನಡೆಯಲಿವೆ.
ಗುಂಪುಗಳು:
ಎ (ಬೆಂಗಳೂರು): ಸೌರಾಷ್ಟ್ರ, ಕೇರಳ, ಮುಂಬೈ, ರೈಲ್ವೇಸ್, ತ್ರಿಪುರ, ಪುದುಚೇರಿ, ಒಡಿಶಾ, ಸಿಕ್ಕಿಂ.
ಬಿ(ಜೈಪುರ): ಮಹಾರಾಷ್ಟ್ರ, ಜಾರ್ಖಂಡ್, ಹೈದರಾಬಾದ್, ಚಂಡೀಗಢ, ವಿದರ್ಭ, ಸರ್ವೀಸಸ್, ಮೇಘಾಲಯ, ಮಣಿಪುರ.
ಸಿ (ಅಹಮದಾಬಾದ್): ಕರ್ನಾಟಕ, ಜಮ್ಮು-ಕಾಶ್ಮೀರ, ಚಂಡೀಗಢ, ಹರಿಯಾಣ, ದೆಹಲಿ, ಉತ್ತರಾಖಂಡ, ಬಿಹಾರ, ಮಿಜೋರಾಂ.
ಡಿ (ಚಂಡೀಗಢ): ಅಸ್ಸಾಂ, ಉತ್ತರ ಪ್ರದೇಶ, ಆಂಧ್ರ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ.
ಇ (ಮುಂಬೈ): ಪಂಜಾಬ್, ತಮಿಳುನಾಡು, ಮಧ್ಯಪ್ರದೇಶ, ಬಂಗಾಳ, ಬರೋಡ, ಗೋವಾ, ನಾಗಾಲ್ಯಾಂಡ್.
ತಾರೆಯರು ಕಣಕ್ಕೆ
ಟೂರ್ನಿಯಲ್ಲಿ ಯುವ ಆಟಗಾರರ ಜತೆಗೆ ಕೆಲ ಅನುಭವಿ ಆಟಗಾರರೂ ಆಯ್ಕೆಗಾರರ ಗಮನಸೆಳೆದು ವೃತ್ತೀಜಿವನದ ಪುನರುತ್ಥಾನಕ್ಕೆ ಪ್ರಯತ್ನಿಸಲಿದ್ದಾರೆ. ಆಸೀಸ್ ವಿರುದ್ಧದ ಟಿ20 ಸರಣಿಗೆ ಕಡೆಗಣಿಸಲ್ಪಟ್ಟಿರುವ ಸಂಜು ಸ್ಯಾಮ್ಸನ್, ಕೇರಳ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ. ಕರ್ನಾಟಕದಿಂದ ವಿದರ್ಭಕ್ಕೆ ವಲಸೆ ಹೋಗಿರುವ ಅನುಭವಿ ಬ್ಯಾಟರ್ ಕರುಣ್ ನಾಯರ್, ಬರೋಡ ನಾಯಕ ಕೃನಾಲ್ ಪಾಂಡ್ಯ, ವಿಶ್ವಕಪ್ ವೇಳೆ ಕಾಮೆಂಟರಿಯಲ್ಲಿ ಬಿಜಿಯಾಗಿದ್ದ ತಮಿಳುನಾಡಿನ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್, ಮುಂಬೈನ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ, ಮಹಾರಾಷ್ಟ್ರದ ಕೇದಾರ್ ಜಾಧವ್ ಕಣದಲ್ಲಿರುವ ಪ್ರಮುಖರು.