ಪುತ್ತೂರು: ಶಿಕ್ಷಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುವ ಪ್ರಯತ್ನ ಮಾಡುತ್ತಿರುವ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನೀಡುವ ಕಾರ್ಯ ನಡೆದಿದೆ. ಶೇ.೧೦೦ ಫಲಿತಾಂಶ ಪಡೆದುಕೊಳ್ಳುತ್ತಿರುವ ವಿದ್ಯಾಸಂಸ್ಥೆಯಲ್ಲಿ ಡಿ.೧೪ರಂದು ವಾರ್ಷಿಕ ಕ್ರೀಡಾಕೂಟ, ೧೯ರಂದು ಬಹುಮಾನ ವಿತರಣೆ ಕಾರ್ಯಕ್ರಮ, ೨೦ರಂದು ವಾರ್ಷಿಕೋತ್ಸವ ನಡೆಯಲಿದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಸವಣೂರು ಸೀತಾರಾಮ ರೈ ಕೆ. ಹೇಳಿದರು.
೧೪ರಂದು ನಡೆಯುವ ಕ್ರೀಡಾ ರಶ್ಮಿ ಕ್ರೀಡಾಕೂಟವನ್ನು ಪುತ್ತೂರು ನಗರ ಉಪನಿರೀಕ್ಷಕ ಆಂಜನೇಯ ರೆಡ್ಡಿ ಉದ್ಘಾಟಿಸಲಿದ್ದಾರೆ. ವಿದ್ಯಾಚೇತನ ಆಡಿಟೋರಿಯಂ ನಲ್ಲಿ ೧೯ರಂದು ನಡೆಯುವ ಸಮ್ಮಾನ ರಶ್ಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಽಕಾರಿ ಅಶ್ವಿನ್ ಎಲ್. ಶೆಟ್ಟಿ ವಹಿಸಲಿದ್ದು, ಕುಕ್ಕೆ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪಿಯು ಕಾಲೇಜು ಪ್ರಾಂಶುಪಾಲ ಸೋಮಶೇಖರ್ ನಾಯಕ್, ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟಿ ಸುಂದರ ರೈ, ರಕ್ಷಕ ಶಿಕ್ಷಕಿ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್ ರೈ ಕಲಾಯಿ ಮತ್ತಿತರರು ಭಾಗವಹಿಸಲಿದ್ದಾರೆ. ೨೦ರಂದು ಸಂಜೆ ೫.೩೦ರಿಂದ ನಡೆಯುವ ಸಂಭ್ರಮ ರಶ್ಮಿ ಕಾರ್ಯಕ್ರಮವನ್ನು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಉದ್ಘಾಟಿಸಲಿದ್ದು, ಮಂಗಳೂರು ಎಸಿಪಿ ನಝ್ಮ ಫಾರೂಖಿ, ವಿವೇಕಾನಂದ ನಿವೃತ್ತ ಪ್ರಾಂಶುಪಾಲ ಡಾ.ಡಿ.ಮಾಧವ ಭಟ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾಸಂಸ್ಥೆಯಲ್ಲಿ ಎಲ್‌ಕೆಜಿಯಿಂದ ಪದವಿ ಶಿಕ್ಷಣದವರೆಗೆ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲ್ಯಾಬೊರೇಟರಿ, ಅಟಲ್ ಟಿಂಕರಿಂಗ್ ಲ್ಯಾಬ್, ಸ್ಮಾರ್ಟ್‌ಬೋರ್ಡ್, ಮಕ್ಕಳ ರಕ್ಷಣೆಗಾಗಿ ಸಿಸಿ ಕ್ಯಾಮರಾಗಳನ್ನು, ಕಂಪ್ಯೂಟರ್ ಪ್ರಯೋಗಾಲಯಗಳನ್ನು ಅಳವಡಿಸಲಾಗಿದೆ. ಕಲಿಕಾ ತೋಟ, ಮಕ್ಕಳ ಪ್ರಾಯೋಗಿಕ ಕಲಿಕಾ ಕೃಷಿ ತೋಟ, ಭಾರತೀಯ ಸಂಸ್ಕೃತಿ ಪ್ರಸಾರಕ್ಕಾಗಿ ವರ್ಲಿ ಚಿತ್ರಗಳ ರಚನೆ ಮಾಡಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡ್ರೋನ್ ನಿರ್ಮಾಣ ತರಬೇತಿ, ಕಂಪ್ಯೂಟರ್ ಕೋಡಿಂಗ್, ಕ್ರಿಯೇಟಿವ್ ಆರ್ಟ್ ತರಬೇತಿ ಸೇರಿ ವಿವಿಧ ವಿಚಾರಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆಡಳಿತಾಽಕಾರಿ ಅಶ್ವಿನ್ ಎಲ್. ಶೆಟ್ಟಿ, ಟ್ರಸ್ಟಿ ಮಹೇಶ್ ರೈ, ಪಿಯು ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾಲಯಗಳ ಪ್ರಾಂಶುಪಾಲೆ ಶಶಿಕಲಾ ಆಳ್ವ ಉಪಸ್ಥಿತರಿದ್ದರು.