More

  ವಿದ್ಯಾಮಾನ್ಯ ಶ್ರೀಗಳು ಚಿನ್ನದಂತಹ ವ್ಯಕ್ತಿತ್ವದವರು

  ಸುಗುಣೇಂದ್ರ ಶ್ರೀಪಾದರಿಂದ ಶ್ಲಾಘನೆ | ರಾಜಾಂಗಣದಲ್ಲಿ ಸಂಸ್ಮರಣಾ ಕಾರ್ಯಕ್ರಮ

  ವಿಜಯವಾಣಿ ಸುದ್ದಿಜಾಲ ಉಡುಪಿ
  ನಮ್ಮ ಸ್ವರೂಪೋದ್ಧಾರಕ ಗುರುಗಳಾದ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥರು ನಿಷ್ಕಳಂಕ, ಶುದ್ಧ ಚಿನ್ನದಂತಹ ವ್ಯಕ್ತಿತ್ವದವರು. ಮನಸ್ಸು, ಮಾತು-ಕ್ರಿಯೆಗಳಲ್ಲಿ ಒಂದೇ ರೀತಿಯಲ್ಲಿ ಇದ್ದವರು. ಎಂದಿಗೂ ಇನ್ನೊಬ್ಬರನ್ನು ದ್ವೇಷಿಸುವ ಪ್ರವೃತ್ತಿ ಅವರಲ್ಲಿ ಇರಲಿಲ್ಲ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ಲಾಘಿಸಿದರು.

  ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರ ಆರಾಧನೆ ನಿಮಿತ್ತ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ರಾತ್ರಿ ಆಯೋಜಿದ್ದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಗುರುಗಳ ವ್ಯಕ್ತಿತ್ವ ಸ್ಮರಿಸಿ, ಮಾತನಾಡಿದರು.

  ಶಿಷ್ಯರೆಂದರೆ ಬಲು ಪ್ರೀತಿ

  ಶುದ್ಧವಾದ ಯತಿಧರ್ಮ ಪಾಲನೆ, ಪಾಠ-ಪ್ರವಚನಗಳಲ್ಲಿ ಅಚಲವಾದ ದೀಕ್ಷೆ, ಶಿಷ್ಯ ವಾತ್ಸಲ್ಯ, ಸಮಾಜದ ಅಭಿವೃದ್ಧಿಯ ಹಂಬಲ, ಆದರ್ಶ ಗುಣಗಳುಳ್ಳ ಗುರುಗಳು ಅವರು. ಪೇಜಾವರ ಮಠದ ವಿಶ್ವೇಶ ತೀರ್ಥರು ಸೇರಿ ಅನೇಕ ಯತಿಗಳನ್ನು ವಿದ್ವಾಂಸರನ್ನಾಗಿ ರೂಪಿಸಿದವರು. ಅಂತಹ ಪರಿಶುದ್ಧ ಗುರುಗಳಿಂದ ಪೂಜಿಸಿಕೊಳ್ಳಲು ಸಂಕಲ್ಪಿಸಿ ಶ್ರೀಕೃಷ್ಣನು ಅವರಿಗೆ ಭಂಡಾರಕೇರಿ ಮಠದ ಜತೆಗೆ ಪಲಿಮಾರು ಮಠದ ಅಧಿಪತ್ಯವನ್ನೂ ಕರುಣಿಸಿದ್ದ ಎಂದರು.

  ನಾವೇ ಧನ್ಯರು

  ಭಗವಂತನ ಪರಮಾನುಗ್ರಹದಿಂದ ದೊರೆತಿದ್ದ ಶ್ರೀಕೃಷ್ಣ ಪೂಜಾ ಪರ್ಯಾಯದಲ್ಲಿ ಚಿನ್ನದ ರಥ, ವಜ್ರ ಕಿರೀಟ ಸಮರ್ಪಿಸಿ ಗುರುಗಳು ಧನ್ಯರಾದರು. ಪ್ರಾತ: ಸ್ಮರಣೀಯರಾದ ಅಂತಹ ಮಹಾಗುರುಗಳನ್ನು ಪಡೆದ ನಾವೇ ಧನ್ಯರು ಎಂದರು.

  ಪುತ್ತಿಗೆ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಶ್ರೀಮದ್ಭಾಗವತದ ದಶಮಸ್ಕಂದದ ಚಿಂತನೆ ಮಾಡಿ, ಶ್ರೀ ವಿದ್ಯಾಮಾನ್ಯ ತೀರ್ಥರಿಗೆ ಸಮರ್ಪಿಸಿದರು.

  ಡಾ. ಶಂಕರನಾರಾಯಣ ಅಡಿಗ, ವಿದ್ವಾನ್​ ನಂದಿಕೂರು ಜನಾರ್ದನ ಭಟ್​, ವಿದ್ವಾನ್​ ಹೃಷಿಕೇಶ ಮಠದ ಇವರು ಶ್ರೀ ವಿದ್ಯಾಮಾನ್ಯತಿರ್ಥರ ಮಹಿಮೆಗಳನ್ನು ಮನೋಜ್ಞವಾಗಿ ತಿಳಿಸಿದರು. ಸಭಾ ಕಾರ್ಯಕ್ರಮದಲ್ಲಿ ಅನೇಕ ವಿದ್ವಾಂಸರು ಪಾಲ್ಗೊಂಡಿದ್ದರು. ಶ್ರೀಗಳ ಆರಾಧನೆ ನಿಮಿತ್ತ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.

  ಡಾ. ಬಿ.ಗೋಪಾಲಾಚಾರ್​ ಹಾಗೂ ಮಹಿತೋಷ್​ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts