

ನವದೆಹಲಿ : ರೈಲ್ವೆ ವ್ಯವಸ್ಥೆಯ ವಿದ್ಯುತೀಕರಣ ಯೋಜನೆಯ ಅಂಗವಾಗಿ ಉತ್ತರ ಪ್ರದೇಶದ ಭಾಡಯಿ ಮತ್ತು ಇಟಾವಾ ನಿಲ್ದಾಣಗಳ ನಡುವೆ ಮೊದಲ ಎಲೆಕ್ಟ್ರಿಕ್ ಟ್ರೈನಿನ ಸಂಚಾರವನ್ನು ಇಂದು ಆರಂಭಿಸಲಾಯಿತು. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿ, ವಿದ್ಯುತ್ ಚಾಲಿತ ರೈಲಿನ ವಿಡಿಯೋ ತುಣುಕನ್ನು ಶೇರ್ ಮಾಡಿದ್ದಾರೆ.
"ಭಾರತದ ರೈಲ್ವೆ ವ್ಯವಸ್ಥೆಯನ್ನು ತ್ವರಿತವಾಗಿ ವಿದ್ಯುತೀಕರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ರೈಲುಗಳ ವೇಗ ಹೆಚ್ಚಲಿದೆ. ಜೊತೆಗೆ ಪರಿಸರ ಸಂರಕ್ಷಣೆಯಾಗುವುದಲ್ಲದೆ, ಡೀಸಲ್ ಹಾಗೂ ವಿದೇಶೀ ಮುದ್ರಾಂಕದ ಉಳಿತಾಯವಾಗುತ್ತದೆ" ಎಂದು ಗೋಯಲ್ ಹೇಳಿದ್ದಾರೆ.
ಪ್ರಸ್ತುತವಾಗಿ ಬಳಸಲಾಗುತ್ತಿರುವ ಡೀಸೆಲ್ ಟ್ರೇನ್ಗಳ ಬದಲಿಗೆ, ಹೊಗೆರಹಿತವಾದ ವಿದ್ಯುತ್ ರೈಲುಗಳನ್ನು ಅಳವಡಿಸಲು ರೈಲ್ವೆ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ಗೋಯಲ್ ಅವರು 2024 ನೇ ಇಸವಿಯ ವೇಳೆಗೆ ಶೇ.100 ರಷ್ಟು ವಿದ್ಯುತೀಕರಣ ಮಾಡುವ ಉದ್ದೇಶವಿದೆ ಎಂದು ಈ ಮುನ್ನ ಹೇಳಿಕೆ ನೀಡಿದ್ದರು. (ಏಜೆನ್ಸೀಸ್)