

ನವದೆಹಲಿ: ಕೇಂದ್ರದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ದೇಶದ ಅನೇಕ ಗಣ್ಯರು ಸ್ವಾಗತಿಸಿದ್ದಾರೆ. ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್ನ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿ ರೈತರ ಈ ಗೆಲುವಿಗೆ ಶುಭಾಶಯ ಕೋರಿದ್ದಾರೆ.
"ದೇಶದ ಅನ್ನದಾತನು ಸತ್ಯಾಗ್ರಹದಿಂದ ಅಹಂಕಾರದ ತಲೆಯನ್ನು ತಗ್ಗಿಸಿಬಿಟ್ಟ! ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು" ಎಂದು ಹೇಳಿರುವ ರಾಗಾ, "ಜೈ ಹಿಂದ್, ಜೈ ಹಿಂದ್ ಕಾ ಕಿಸಾನ್" ಎಂದು ಉದ್ಗರಿಸಿದ್ದಾರೆ. ಜೊತೆಗೇ, ರೈತ ಮುಖಂಡರ ಹೋರಾಟವನ್ನು ಆರಂಭದಿಂದ ಬೆಂಬಲಿಸುತ್ತಾ ಬಂದಿರುವ ರಾಹುಲ್ ಗಾಂಧಿ, ಈ ಸಂದರ್ಭದಲ್ಲಿ, ತಮ್ಮ ಹಿಂದಿನ ಸಂದರ್ಶನದ ವಿಡಿಯೋ ತುಣುಕೊಂದನ್ನು ಶೇರ್ ಮಾಡಿದ್ದಾರೆ.
ಕಳೆದ ಜನವರಿ 14 ರ ಈ ವಿಡಿಯೋ ಪೋಸ್ಟ್ನಲ್ಲಿ, "ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ನಾನು ರೈತರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ... ಈ ಕಾನೂನುಗಳನ್ನು ಸರ್ಕಾರ ಮುಂದೊಂದು ದಿನ ವಾಪಸ್ ಪಡೆಯಲೇಬೇಕಾಗುತ್ತದೆ" ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ಹೇಳಿರುವುದು ದಾಖಲಾಗಿದೆ. (ಏಜೆನ್ಸೀಸ್)