VIDEO | ಸಂಸತ್ತಿನ ಹೊರಗಡೆ ವಿಪಕ್ಷ ನಾಯಕರ ವಾಕ್​​ಸಮರ!

vid
Published on

ನವದೆಹಲಿ : ಜಪಾನಿನ ರಾಜಧಾನಿಯಲ್ಲಿ ಒಲಿಂಪಿಕ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಬಾಕ್ಸಿಂಗ್ ಮತ್ತು ಕುಸ್ತಿ ಪಂದ್ಯಗಳನ್ನು ಆಡುತ್ತಿದ್ದರೆ, ಭಾರತದ ರಾಜಧಾನಿಯಲ್ಲಿ ರಾಜಕಾರಣಿಗಳು ಮಾತಿನ ಪಂದ್ಯಾವಳಿಯಲ್ಲಿ ತೊಡಗಿದ್ದಾರೆ! ಈ ರೀತಿಯಾಗಿ ಘರ್ಷಣೆಯಲ್ಲಿ ತೊಡಗಿದ ಪಂಜಾಬ್​ನ ಇಬ್ಬರು ವಿಪಕ್ಷ ಸಂಸದರ ವಾಗ್ವಾದದ ದೃಶ್ಯವು ಮಾಧ್ಯಮದವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಿನ್ನೆಯಷ್ಟೆ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲಾ ವಿರೋಧಪಕ್ಷಗಳೂ ಒಂದಾಗಿವೆ ಎಂದು ತೋರಿಸಲು ಬ್ರೇಕ್​ಫಾಸ್ಟ್​ ಮೀಟಿಂಗ್ ಇಟ್ಟುಕೊಂಡಿದ್ದರು. ಆದರೆ ಇಂದು ಬೆಳಿಗ್ಗೆ ದೆಹಲಿಯಲ್ಲಿ ಸಂಸತ್ತಿನ ಹೊರಗೆ ಕಾಂಗ್ರೆಸ್​ನ ರವನೀತ್​ ಸಿಂಗ್ ಬಿಟ್ಟು ಮತ್ತು ಅಕಾಲಿ ದಳದ ಹರಸಿಂರತ್ ಕೌರ್​ ಬಾದಲ್​, ಸಣ್ಣ ಜಗಳವನ್ನೇ ಪ್ರದರ್ಶಿಸಿದ್ದಾರೆ.

ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಫಲಕಗಳನ್ನು ಹಿಡಿದು ನಿಂತಿದ್ದ ಅಕಾಲಿ ದಳದ ಮಾಜಿ ಸಚಿವೆ ಹರಸಿಂರತ್​ ಕೌರ್​​ ಅವರತ್ತ ಬೆಟ್ಟು ಮಾಡಿದ ರವನೀತ್​ ಸಿಂಗ್ ಬಿಟ್ಟು ಅವರು, "ಕೇಂದ್ರ ಸಂಪುಟವು (ಕೃಷಿ)ಮಸೂದೆಯನ್ನು ಈಕೆ ಸಚಿವರಾಗಿದ್ದಾಗಲೇ ಪಾಸ್ ಮಾಡಿತು. ಇವರು (ಅಕಾಲಿ ದಳ) ಡ್ರಾಮಾ ಮಾಡುವುದನ್ನು ನಿಲ್ಲಿಸಬೇಕು. ಕಾನೂನಿನ ವಿರುದ್ಧ ಸಚಿವರಾಗಿದ್ದಾಗ ಇವರು ಒಂದೂ ಮಾತನಾಡಲಿಲ್ಲ" ಎಂದು ಸುದ್ದಿಗಾರರಿಗೆ ಹೇಳಿದರು.

ಕೌರ್​ ಅವರು ಕಳೆದ ವರ್ಷ ಕೃಷಿ ಕಾನೂನುಗಳ ಬಗ್ಗೆ ಪ್ರತಿಭಟನೆ ಹೆಚ್ಚಿದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್​ ನಾಯಕನ ಮಾತಿಗೆ ಪ್ರತಿಕ್ರಿಯಿಸಿದ ಕೌರ್​, "ದಯವಿಟ್ಟು ಅವರನ್ನು ಕೇಳಿ.... ಅದೆಲ್ಲಾ ನಡೆಯುತ್ತಿರುವಾಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಎಲ್ಲಿದ್ದರು? ಈ ಪಾರ್ಟಿಯು(ಕಾಂಗ್ರೆಸ್) ವಾಕೌಟ್​ ನಡೆಸುವ ಮೂಲಕ ಮಸೂದೆಗಳ ಅಂಗೀಕಾರಕ್ಕೆ ಸಹಾಯ ಮಾಡಿದವು. ಇವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು" ಎಂದರು.

ಈ ಸಂಸದರ ಕೂಗಾಟವನ್ನೆಲ್ಲಾ ದಾಖಲಿಸಿಕೊಂಡ ಮಾಧ್ಯಮದವರು, ಸರ್ಕಾರದ ವಿರುದ್ಧ ವಿಪಕ್ಷಗಳು ಒಂದಾಗಿ ನಿಲ್ಲುವುದಿಲ್ಲವೇ ಎಂದದ್ದಕ್ಕೆ, ಕಾಂಗ್ರೆಸ್ ಸಂಸದ ಬಿಟ್ಟು, "ಏನು ಏಕತೆ? ಇವರು(ಅಕಾಲಿದಳ) ಮಸೂದೆಗಳನ್ನು ಪಾಸ್ ಮಾಡಿಸಿದರು.. ಇವರೊಂದಿಗೆ ಏನು ಏಕತೆ? ಐದು ದಿನಗಳಾದವು... ಅವರನ್ನು ಕೇಳಿ ಪಕ್ಷದ ಮುಖ್ಯಸ್ಥ ಸುಖಬೀರ್​ ಸಿಂಗ್ ಬಾದಲ್ ಎಲ್ಲಿದ್ದಾರೆ ಅಂತ" ಎಂದು ಹೇಳಿ ಒಳನಡೆದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net