

ನಾವು ಪ್ರಾಣ ನೀಡಲು ಸಿದ್ಧರಾಗಿದ್ದೇವೆ. ಆದರೆ ಮಸೀದಿಯನ್ನು ತೊರೆಯಲು ಸಿದ್ಧರಿಲ್ಲ ಎಂದು ಲಾಕ್ಡೌನ್ ನಿಯಮ ವಿರುದ್ಧ ಭಾಷಣ ಮಾಡುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಕರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ 5 ಮಂದಿಗಿಂತ ಹೆಚ್ಚು ಜನರು ಗುಂಪು ಸೇರಬಾರದು. ಮಸೀದಿಗೆ ತೆರಳಬಾರದು ಎಂಬ ಸೂಚನೆಯನ್ನು ಧಿಕ್ಕರಿಸಬೇಕು. ಮಸೀದಿಗಳು ನಿರ್ಜನವಾಗುತ್ತಿವೆ ಎಂದು ಭಾವಿಸಿ, ಪ್ರಾಣ ಬೇಕಾದರೂ ನೀಡುತ್ತೇವೆ. ಮಸೀದಿಯನ್ನು ಬಿಡುವುದಿಲ್ಲ ಎಂದು ಮನಸ್ಸು ಮಾಡಿ ಎಲ್ಲರೂ ಬರಬೇಕು ಎಂದು ವ್ಯಕ್ತಿಯೊಬ್ಬರು ಜನ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿರುವ 1.35 ನಿಮಿಷಗಳ ವಿಡಿಯೋ ವೈರಲ್ ಆಗಿದೆ.
"ಆಲ್ ಇಂಡಿಯಾ ನ್ಯೂಸ್" ಎಂಬ ಫೇಸ್ಬುಕ್ ಪುಟದಲ್ಲೂ ಇದು ಅಪ್ಲೋಡ್ ಆಗಿದೆ. ಈ ವಿಡಿಯೋ ಭಾರತದ್ದು ಎಂದು ಕೆಲವು ನೆಟ್ಟಿಗರು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಆದರೆ ಪ್ಯಾಕ್ಟ್ಚೆಕ್ ಮೂಲಕ ಪರಿಶೀಲನೆ ನಡೆಸಿದಾಗ ಈ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ನೆರೆ ರಾಷ್ಟ್ರ ಪಾಕಿಸ್ತಾನದ್ದು ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ರೂಮ್ (ಎಎಫ್ಡಬ್ಲ್ಯೂಎ) ಪತ್ತೆ ಮಾಡಿದೆ.
ನೆರೆ ರಾಷ್ಟ್ರ ಪಾಕಿಸ್ತಾನದ ಮನ್ಶೇರಾದಲ್ಲಿ ಏಪ್ರಿಲ್ 13ರಂದು ಅಂತ್ಯಕ್ರಿಯೆಗೆ ಸೇರಿದ್ದ ಜನರನ್ನು ಉದ್ದೇಶಿಸಿ ಜಮಾತ್-ಉಲೇಮಾ-ಇ- ಇಸ್ಲಾಂ ಸಂಘಟನೆಯ ಮುಖ್ಯಸ್ಥ ಮುಫ್ತಿ ಕಿಫಾಯತ್ ಉಲ್ಲಾ ಮಾತನಾಡುತ್ತಿದ್ದಾರೆ. ಅಮೆರಿಕಾದ ನಿರ್ದೇಶನದಂತೆ ಪಾಕ್ ನಡೆದುಕೊಳ್ಳುತ್ತಿದೆ. ಇದರಿಂದ ನಮ್ಮ ಮಸೀದಿಗಳು ನಿರ್ಜನವಾಗುತ್ತಿವೆ. ಸರ್ಕಾರದ ಆದೇಶ ಧಿಕ್ಕರಿಸಿ, ಪ್ರಾಣ ಹೋದರು ಸರಿಯೇ ಮಸೀದಿಗೆ ಬರುವುದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಈ ಪ್ರಚೋದನಕಾರಿ ಭಾಷಣವನ್ನು ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಲಾಕ್ಡೌನ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಮುಫ್ತಿಯನ್ನು ಬಂಧಿಸಿದೆ. (ಏಜೆನ್ಸೀಸ್)