

Maharastra: ಮಹಾರಾಷ್ಟ್ರ ವಿಧಾನಸಭೆ ಮುಂದೆ ಬಿಜೆಪಿ ಮತ್ತು ಎನ್ಸಿಪಿ ಶರದ್ ಪವರ್ ಬಣದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯ ದೃಶ್ಯ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಬಿಜೆಪಿ ಶಾಸಕ ಗೋಪಿಚಂದ್ ಪಡಲ್ಕರ್, ಎನ್ಸಿಪಿ ಶರದ್ ಪವರ್ ಬಣದ ಶಾಸಕ ಜಿತೇಂದ್ರ ಅವ್ಹಾದ್ ಹಾಗೂ ಅವರ ಬೆಂಬಲಿಗರ ನಡುವೆ ಮಾರಾಮಾರಿ ಸಂಭವಿಸಿದೆ. ವಿಧಾನಸಭಾ ಹೊರೆಗೆ ಮಾತಿಗೆ ಮಾತು ಬೆಳೆದ ಹಿನ್ನಲೆ ಅವಾಚ್ಯ ಶಬ್ದಗಳಿಂದ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಎನ್ಸಿಪಿ ಶಾಸಕ ಜಿತೇಂದ್ರ ಅವ್ಹಾದ್ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಹೋಗುವಾಗ ‘ಮಂಗಳಸೂತ್ರ ಕಳ್ಳ’ ಎಂದು ಘೋಷಣೆ ಕೂಗಿದ್ದರು. ಇದು ಗೋಪಿಚಂದ್ರನ್ನೇ ಗುರಿಯಾಗಿಸಿ ಹೇಳಿದ್ದು ಎಂದು ವ್ಯಾಪಾಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ಶಾಸಕರ ಬೆಂಬಲಿಗರ ನಡುವಿನ ಹೊಡೆದಾಟದ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್ಸಿಪಿ ನಾಯಕ ರೋಹಿತ್ ಪವಾರ್ ಪ್ರಸ್ತಾಪಿಸಿದ್ದು, ಘಟನೆ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ತನಿಖೆ ನಡೆಸುವುದಾಗಿ ಸ್ಪೀಕರ್ ರಾಹುಲ್ ನಾರ್ವೇಕರ್ ಭರವಸೆಯನ್ನೂ ನೀಡಿದ್ದಾರೆ. ಸ್ಪೀಕರ್ ಮತ್ತು ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾದ ಗೋಪಿಚಂದ್, ಇಡೀ ಘಟನೆ ದುರದೃಷ್ಟಕರ ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದ್ದು, ಶಾಸಕ ಗೋಪಿಚಂದ್ ಮತ್ತು ಜಿತೇಂದ್ರ ಅವ್ಹಾದ್ರ ಇಬ್ಬರು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)