VIDEO: ದಯವಿಟ್ಟು ನಮ್ಮನ್ನು ಕರೆಸಿಕೊಳ್ಳಿ: ಮುಂಬೈನಲ್ಲಿ ಸಿಲುಕಿರುವ ಕನ್ನಡತಿ ಅಳಲು

Sowmya from mumbai 8 MAY 20
Published on

ಮಂಡ್ಯ: ‘ಕರೊನಾ ವೈರಸ್‌ನಿಂದಾಗಿ ಮುಂಬೈನಲ್ಲಿ ನಾವು ತುಂಬಾ ಕಷ್ಟಪಡುತ್ತಿದ್ದೇವೆ. ದಯಮಾಡಿ ನಮ್ಮನ್ನು ಕರ್ನಾಟಕಕ್ಕೆ ಕರೆಸಿಕೊಳ್ಳಿ’ ಎಂದು ಮಂಡ್ಯ ಮೂಲದ ಮಹಿಳೆ ಸೌಮ್ಯಾ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಲಾಕ್‌ಡೌನ್‌ನಿಂದಾಗಿ ತಾವು ಅನುಭವಿಸುತ್ತಿರುವ ಕಷ್ಟವನ್ನು ಅದರಲ್ಲಿ ಬಿಚ್ಚಿಟ್ಟಿದ್ದಾರೆ.

‘‘ನಾವು ಕನ್ನಡಿಗರಾಗಿದ್ದರೂ ನಮ್ಮನ್ನು ನೀವು ಮರೆತು ಬಿಟ್ಟಿದ್ದೀರ. ಮುಂಬೈನಲ್ಲಿ ನಾವು ತುಂಬ ಕಷ್ಟಪಡುತ್ತಿದ್ದೇವೆ. ನನ್ನ ಗಂಡ ಕೂಲಿ ಮಾಡುತ್ತಿದ್ದಾರೆ. ತುಂಬಾ ಜನ ಕನ್ನಡಿಗರು ಇಲ್ಲಿ ಸಿಕ್ಕಿಕೊಂಡಿದ್ದೇವೆ. ಕೆಲವರು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಆಟೋ ಓಡಿಸುತ್ತಿದ್ದಾರೆ. ಇನ್ನು ಕೆಲವರು ದೋಸೆ ಅಂಗಡಿ ಇಟ್ಟುಕೊಂಡಿದ್ದಾರೆ. ಬಿಹಾರ, ಉತ್ತರ ಪ್ರದೇಶದ ಕಡೆಯವರನ್ನು ಅಲ್ಲಿನ ಜನ ಕರೆಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮನ್ನು ಕೇಳುವವರೇ ಇಲ್ಲದಾಗಿದೆ’’ ಎಂದು ನೋವು ತೋಡಿಕೊಂಡಿದ್ದಾರೆ.

‘‘ಚುನಾವಣೆ ಇದ್ದರೆ ಉಚಿತವಾಗಿ ಬಸ್ ಕಳುಹಿಸಿ ಇಲ್ಲಿಂದ ನಮ್ಮನ್ನು ಕರೆಸಿಕೊಳ್ಳುತ್ತಾರೆ. ಆದರೆ ಈಗ ಕಷ್ಟ ಕಾಲ ಬಂದಿದೆ. ಏಕೆ ಯಾರೂ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ? ಊರಲ್ಲಿ ಆದಾಯವಿಲ್ಲ ಎಂಬ ಕಾರಣಕ್ಕೆ ನಾವೆಲ್ಲ ಇಲ್ಲಿಗೆ ಕೂಲಿಗಾಗಿ ಬಂದಿದ್ದೇವೆ. ನಾವು ನಮ್ಮ ತಾಯ್ನಡಿಗೆ ಬರುವುದು ತಪ್ಪಾ?’’ ಎಂದು ಪ್ರಶ್ನಿಸಿದ್ದಾರೆ.

‘‘ಮುಂಬೈನಿಂದ ಶವ ತಂದು ಕರೊನಾ ಹರಡುತ್ತಾರೆ ಎನ್ನುವುದು ಸರಿಯಲ್ಲ. ನಾವೇನು ಕದ್ದು ಬರುವುದಿಲ್ಲ. ನೀವು ನಮ್ಮನ್ನು ಪರೀಕ್ಷಿಸಿ ಕರೆಸಿಕೊಳ್ಳಿ. ಮುಂಬೈನವರು ಬಂದರೆ ಕರೊನಾ ಬರುತ್ತದೆ ಎಂದು ತಿಳಿದುಕೊಳ್ಳಬೇಡಿ. ನಾವು ನಮ್ಮೂರಿಗೆ ಬಾರದೆ ಬೇರೆ ಎಲ್ಲಿಗೆ ಹೋಗಬೇಕು? ಇಂತಹ ಸ್ಥಿತಿಯಲ್ಲಿ ನೀವು ನಮಗೆ ಧೈರ್ಯ ಹೇಳಬೇಕು’’ ಎಂದು ಕೈ ಮುಗಿದು ಮನವಿ ಮಾಡಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net