ಕೋಪದಿಂದ ಆಟೋ ರಿಕ್ಷಾ ಕಡೆ ನುಗ್ಗಿದ ಕುದುರೆ: 20 ನಿಮಿಷ ವಾಹನದಲ್ಲೇ ಸಿಲುಕಿ ಪರದಾಟ! Horses

Horses
Published on

Horses : ಎರಡು ಕುದುರೆಗಳು ನಡು ರಸ್ತೆಯಲ್ಲಿ ಜಗಳವಾಡುತ್ತಿದ್ದ ಸಂದರ್ಭದಲ್ಲಿ ಅದರಲ್ಲಿ ಒಂದು ಕುದುರೆ ತನ್ನ ಮುಂದೆ ಹಾದುಹೋದ ಆಟೋದತ್ತ ಕೋಪದಿಂದ ನುಗ್ಗಿದ ಪರಿಣಾಮ, ಅಲ್ಲಿಯೇ ಸಿಲುಕಿ ಪರದಾಡಿದ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ.

ಬುಧವಾರ (ಜುಲೈ 24) ಜನನಿಬಿಡ ನಾಗರಥ್ ಚೌಕ್‌ನಲ್ಲಿ ಕುದುರೆಗಳು ತೀವ್ರವಾಗಿ ಜಗಳವಾಡಲು ಪ್ರಾರಂಭಿಸಿದವು. ಈ ವೇಳೆ ಸ್ಥಳೀಯರು ಕುದುರೆಗಳನ್ನು ಓಡಿಸಲು ಪ್ರಯತ್ನಿಸಿದರು. ಆದರೆ, ಇದ್ಯಾವುದಕ್ಕೂ ಅಂಜದ ಪ್ರಾಣಿಗಳು ತಮ್ಮ ಕಿತ್ತಾಟವನ್ನು ಮುಂದುವರಿಸಿದವು. ಹೀಗೆ ಜಗಳವಾಡುತ್ತಾ ಕೊನೆಗೆ ಕುದುರೆಗಳು ಹತ್ತಿರದ ಶೋ ರೂಂಗೆ ನುಗ್ಗಿ ಆಸ್ತಿಪಾಸ್ತಿಗೆ ಹಾನಿ ಮಾಡಿದವು. ಇದು ಇಲ್ಲಿಗೆ ನಿಲ್ಲಲಿಲ್ಲ. ಜಗಳ ಮುಂದುವರಿಸಿದ ಕುದುರೆಗಳು ವಾಹನನಿಬಿಡ ರಸ್ತೆಯ ಮೇಲೆ ಬಂದವು.

ಇದೇ ಸಂದರ್ಭದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಟೋ ರಿಕ್ಷಾ ಕುದುರೆ ಜಗಳ ಆಡುತ್ತಿದ್ದ ಸ್ಥಳವನ್ನು ದಾಟಿ ಮುಂದೆ ಸಾಗುವಾಗ ಕೋಪಗೊಂಡ ಒಂದು ಕುದುರೆ ನೇರವಾಗಿ ಚಲಿಸುವ ಆಟೋ ಮೇಲೆಯೇ ಹಾರಿತು. ಡಿಕ್ಕಿಯ ಪರಿಣಾಮವಾಗಿ ಆಟೋ ಚಾಲಕ ಮತ್ತು ಓರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡರು. ಈ ವೇಳೆ ಸ್ಥಳದಲ್ಲಿದ್ದವರು ಸಹಾಯಕ್ಕೆ ಧಾವಿಸಿ, ಗಾಯಾಳುಗಳನ್ನು ವಾಹನದಿಂದ ಹೊರತೆಗೆದು ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಆದರೆ, ಕುದುರೆ ಮಾತ್ರ ಆಟೋದಲ್ಲಿ ಸಿಲುಕಿಕೊಂಡಿತು.

ಸುಮಾರು 20 ನಿಮಿಷಗಳ ಕಾಲ ಆಟೋದಲ್ಲಿ ಸಿಲುಕಿಕೊಂಡು ಕುದುರೆ ಪರದಾಡಿತು. ಕೊನೆಗೂ ಸ್ಥಳೀಯರು ಅದನ್ನು ಬಿಡಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಕುದುರೆಯೂ ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ಕುದುರೆಗಳು ರಸ್ತೆಯ ಇಂಟರ್​ಸೆಕ್ಷನ್​ನಲ್ಲಿ ಜಗಳವಾಡುತ್ತಿರುವುದನ್ನು ಸ್ಥಳೀಯ ನಿವಾಸಿಗಳು ನೋಡಿದ್ದಾರೆ. ಅಲ್ಲದೆ, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿವಾಸಿಗಳಲ್ಲಿ ಒಬ್ಬರಾದ ಮೆಹಮೂದ್, ಕುದುರೆಗಳ ಮಾಲೀಕರ ಮೇಲೆ ಹೊಣೆಗಾರಿಕೆಯನ್ನು ವಿಧಿಸಬೇಕು. ಭವಿಷ್ಯದ ವಿಪತ್ತುಗಳನ್ನು ತಡೆಗಟ್ಟಲು ನಗರ ಮಿತಿಯಲ್ಲಿ ದಾರಿತಪ್ಪಿದ ಕುದುರೆಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net